ತುಮಕೂರು: ಪಾರ್ಟ್‌ಟೈಮ್ ಕೆಲಸದ ಆಮಿಷಕ್ಕೆ ಒಳಗಾಗಿ ನಗರದ ಬಡ್ಡಿಹಳ್ಳಿ ನಿವಾಸಿ ಎ.ಪ್ರದೀಪ್ ಕುಮಾರ್ ಎಂಬುವರು ₹16 ಲಕ್ಷ ಕಳೆದುಕೊಂಡಿದ್ದಾರೆ.
ಸೈಬರ್ ವಂಚಕರು ವಾಟ್ಸ್ ಆ್ಯಪ್ ಮುಖಾಂತರ ಪರಿಚಯಿಸಿಕೊಂಡು ಟೆಲಿಗ್ರಾಂ ಲಿಂಕ್ ಕಳುಹಿಸಿ ಚಾಟಿಂಗ್ ಮಾಡುವಂತೆ ತಿಳಿಸಿದ್ದಾರೆ. ‘ಕಂಪನಿಗಳಿಗೆ ಹಣ ಹೂಡಿಕೆ ಮಾಡಿ ರೇಟಿಂಗ್ಸ್ ನೀಡಿದರೆ ಉತ್ತಮ ಲಾಭ ಗಳಿಸಬಹುದು’ ಎಂದು ಟೆಲಿಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದಾರೆ. ಪ್ರದೀಪ್ ಮಾರ್ಚ್ 14ರಂದು ಸೈಬರ್ ಆರೋಪಿಗಳು ಹೇಳಿದ ಖಾತೆಗೆ ₹11 ಸಾವಿರ ಹಣ ವರ್ಗಾಯಿಸಿದ್ದಾರೆ. ನಂತರ ಲಾಭ ಎಂದು ₹18 ಸಾವಿರ ಪ್ರದೀಪ್ ಖಾತೆಗೆ ವಾಪಸ್ ಹಾಕಿದ್ದಾರೆ.
ಮಾರ್ಚ್ 15ರಂದು ವಿವಿಧ ಖಾತೆಗಳಿಗೆ ₹32,590 ವರ್ಗಾವಣೆ ಮಾಡಿದ್ದಾರೆ. ಇದಾದ ಮೇಲೆ ಪ್ರದೀಪ್ ಖಾತೆಗೆ ಲಾಭಾಂಶ ಎಂದು ₹54 ಸಾವಿರ ವರ್ಗಾಯಿಸಿದ್ದಾರೆ. ಮತ್ತೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿದ ಪ್ರದೀಪ್ ಮಾರ್ಚ್ 29ರಿಂದ ಏ. 19ರ ವರೆಗೆ ಒಟ್ಟು ₹16,72,180 ವರ್ಗಾವಣೆ ಮಾಡಿದ್ದಾರೆ.
‘ಯಾವುದೇ ಲಾಭಾಂಶ ನೀಡದೆ, ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು. ಹೂಡಿಕೆ ಮಾಡಿದ ಹಣ ವಾಪಸ್ ಕೊಡಿಸಬೇಕು’ ಎಂದು ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.