ADVERTISEMENT

ಅಂತೂ ಪಾಪಿಗಳು ಮನೆಗೆ ಹೋದರು: ಕೆ.ಎನ್‌.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 12:20 IST
Last Updated 27 ಜುಲೈ 2019, 12:20 IST
ರಾಜಣ್ಣ
ರಾಜಣ್ಣ   

ತುಮಕೂರು: ‘ಪಾಪಿಗಳು ಬೇಗ ಮನೆಗೆ ಹೋಗಲಿ ಎಂದು ಮೈತ್ರಿ ಸರ್ಕಾರ ಉಳಿಸಲು ನಾನು ಹೋಗಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

‘ನಾನು ಮನಸ್ಸು ಮಾಡಿದ್ದರೆ ಮುಂಬೈಗೆ ಹೋಗಿದ್ದವರಲ್ಲಿ ಅರ್ಧ ಶಾಸಕರನ್ನು ಮರಳಿ ಪಕ್ಷಕ್ಕೆ ಕರೆ ತರುತ್ತಿದ್ದೆ. ಪಾಪಿಗಳು ಬೇಗ ಮನೆಗೆ ಹೋಗಲಿ ಅಂತ ಬೇಕಂತಲೇ ಸುಮ್ಮನೆ ಇದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಮೈತ್ರಿ ಸರ್ಕಾರವನ್ನು ಯಾರೂ ಬೀಳಿಸಿಲ್ಲ. ಅದಾಗಿಯೇ ಬಿದ್ದು ಹೋಯಿತು. ಪಾಪದ ಕೊಡ ತುಂಬಿದ್ದರಿಂದ ಸರ್ಕಾರ ಪತನವಾಗಿದೆ. ಮೈತ್ರಿ ಮುಂದುವರಿದ್ದಿದ್ದರೆ ಕಾಂಗ್ರೆಸ್‌ ಸೊನ್ನೆಯಾಗುತ್ತಿತ್ತು. ಸರ್ಕಾರ ಬಿದ್ದಿದ್ದು ಒಳ್ಳೆಯದೇ ಆಯಿತು’ ಎಂದರು.

‘ಬಿಜೆಪಿ ವಿಶ್ವಾಸಮತ ಸಾಬೀತು ಪಡಿಸುವುದು ಸುಲಭವಲ್ಲ. ಈ ನಡುವೆ ಜೆಡಿಎಸ್‌ ಸಹ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಕುರಿತು ಯೋಚಿಸುತ್ತಿದೆ. ಜೆಡಿಎಸ್‌ ಮುಖಂಡರು ವ್ಯಾಪಾರಸ್ಥರು, ವ್ಯವಹಾರ ನಡೆಸಲು ಅವರು ಏನು ಬೇಕಾದ್ರು ಮಾಡುತ್ತಾರೆ’ ಎಂದು ಹೇಳಿದರು.

‘ನಾನು 1998ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾಗ, ಯಡಿಯೂರಪ್ಪ ಸಹ ಪರಿಷತ್‌ನಲ್ಲಿ ಇದ್ದರು. ಅವರೊಂದಿಗೆ ಪ್ರವಾಸಕ್ಕೆ ಹೋದಾಗ ವಾರಗಟ್ಟಲೇ ಒಂದೇ ಕೊಠಡಿದಲ್ಲಿ ಉಳಿದುಕೊಳ್ಳುತ್ತಿದ್ದೆವು. ಹಾಗಾಗಿ ಅವರೊಂದಿಗೆ ವೈಯಕ್ತಿಕ ವಿಶ್ವಾಸ ಇದೆ. ಆ ವಿಶ್ವಾಸ ಹಾಗೂ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷನಾಗಿ ಯಡಿಯೂರಪ್ಪರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾನಂತು ಬಿಜೆಪಿಗೆ ಸೇರುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದರು.

‘ಜಿ.ಪರಮೇಶ್ವರ ತುಮಕೂರಿಗೆ ಬಂದು ಝಿರೋ ಟ್ರಾಫಿಕ್‌ನಲ್ಲಿ ಓಡಾಡುತ್ತಿದ್ದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಅವರ ಸ್ಥಾನವೂ ಹೋಗಿರುವುದರಿಂದ ದಟ್ಟಣೆಯ ಸಮಸ್ಯೆಯೂ ಬಗೆಹರಿದಿದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.