ADVERTISEMENT

ಕೆ.ಎನ್‌.ರಾಜಣ್ಣ ಮನೆಯಲ್ಲಿ ಮಠಾಧೀಶರ ಸಭೆ: ದೆಹಲಿಗೆ ನಿಯೋಗ ತೆರಳಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
ತುಮಕೂರಿನ ಕೆ.ಎನ್‌.ರಾಜಣ್ಣ ಅವರ ನಿವಾಸದಲ್ಲಿ ಭಾನುವಾರ ವಿವಿಧ ಮಠಗಳ ಮಠಾಧೀಶರು ಸಭೆ ನಡೆಸಿದರು. ಶಾಸಕ ಎಚ್‌.ವಿ.ವೆಂಕಟೇಶ್‌, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಉಪಸ್ಥಿತರಿದ್ದರು
ತುಮಕೂರಿನ ಕೆ.ಎನ್‌.ರಾಜಣ್ಣ ಅವರ ನಿವಾಸದಲ್ಲಿ ಭಾನುವಾರ ವಿವಿಧ ಮಠಗಳ ಮಠಾಧೀಶರು ಸಭೆ ನಡೆಸಿದರು. ಶಾಸಕ ಎಚ್‌.ವಿ.ವೆಂಕಟೇಶ್‌, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಉಪಸ್ಥಿತರಿದ್ದರು   

ತುಮಕೂರು: ಹಿಂದುಳಿದ, ದಲಿತ ಸಮುದಾಯದ ಮಠಾಧೀಶರ ಒಕ್ಕೂಟದ ನಿಯೋಗ ಮಾಜಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ನಗರದ ಕ್ಯಾತ್ಸಂದ್ರ ನಿವಾಸಕ್ಕೆ ಭಾನುವಾರ ಭೇಟಿ ನೀಡಿತು. 15ಕ್ಕೂ ಹೆಚ್ಚು ಮಠಾಧೀಶರು ಸುಮಾರು 2 ಗಂಟೆಗಳ ಕಾಲ ಚರ್ಚಿಸಿದರು.

‘ಒಕ್ಕೂಟದಿಂದ ಮುಂದಿನ ದಿನಗಳಲ್ಲಿ ನವದೆಹಲಿಗೆ ತೆರಳಿ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಾಗುವುದು. ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಲಾಗುವುದು. ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಬೇಡಿಕೆ ಸಲ್ಲಿಸಲಾಗುವುದು’ ಎಂದು ಮಠಾಧೀಶರು ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ರಾಜಣ್ಣ ಅವರಿಗೆ ಒಂದು ಅವಕಾಶ ನೀಡಬಹುದಿತ್ತು. ಏಕಾಏಕಿ ಕೈಬಿಟ್ಟಿದ್ದು, ಜನರಿಗೆ ನೋವಾಗಿದೆ. ಇದನ್ನು ಸರಿ ಮಾಡಬೇಕು. ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಹೊಸದುರ್ಗದ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ADVERTISEMENT

ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ, ‘ರಾಜಣ್ಣ ಶೋಷಿತ ಸಮುದಾಯಗಳ ಗಟ್ಟಿ ಧ್ವನಿ. ಜಾತ್ಯತೀತ ನಾಯಕರಾಗಿ ಒಂದು ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ. ತಪ್ಪು ಗ್ರಹಿಕೆಯಿಂದ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದು ಖಂಡನೀಯ’ ಎಂದರು.

ಚಿತ್ರದುರ್ಗದ ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ, ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ, ವೇದಾರ ಕೇತೇಶ್ವರಮಠದ ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ನಿಟ್ಟೂರಿನ ನಾರಾಯಣ ಗುರು ಮಠದ ರೇಣುಕಾನಂದ ಸ್ವಾಮೀಜಿ, ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠದ ಬಸವ ಮಹಾಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರ ಬಸವ ಸ್ವಾಮೀಜಿ, ಕೆಂಕೆರೆಯ ಚನ್ನಬಸವ ಸ್ವಾಮೀಜಿ, ಶಾಸಕ ಎಚ್‌.ವಿ.ವೆಂಕಟೇಶ್‌, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಹಾಜರಿದ್ದರು.

ಮಠಾಧೀಶರು ಸತ್ಯದ ಪರ ಹೋರಾಡುವುದಕ್ಕೆ ಹೆಚ್ಚಿನ ಶಕ್ತಿ ಕೊಟ್ಟಿದ್ದಾರೆ. ರಾಜಕೀಯದ ಏರುಪೇರು ಸ್ಥಿತ್ಯಂತರದ ಬಗ್ಗೆ ಅವರ ಜತೆ ಚರ್ಚಿಸಿದ್ದೇನೆ.
-ಕೆ.ಎನ್‌.ರಾಜಣ್ಣ, ಮಾಜಿ ಸಚಿವ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.