ADVERTISEMENT

ತುಮಕೂರು: ಸರ್ಕಾರಿ ಗೌರವಗಳೊಂದಿಗೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅಂತ್ಯಕ್ರಿಯೆ

ಕುಟುಂಬಕ್ಕೆ ₹ 25 ಲಕ್ಷ ಪರಿಹಾರ, ಪುತ್ರನಿಗೆ ಸರ್ಕಾರಿ ನೌಕರಿಯ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:23 IST
Last Updated 10 ಜುಲೈ 2020, 14:23 IST
ಬಿ.ಕೆ.ಚಂದ್ರಮೌಳೇಶ್ವರ್ ಪಾರ್ಥಿವ ಶರೀರಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಅಂತಿಮ ನಮನ ಸಲ್ಲಿಸಿದರು
ಬಿ.ಕೆ.ಚಂದ್ರಮೌಳೇಶ್ವರ್ ಪಾರ್ಥಿವ ಶರೀರಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಅಂತಿಮ ನಮನ ಸಲ್ಲಿಸಿದರು   

ಗುಬ್ಬಿ: ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ವೇಳೆ ಹತ್ಯೆಯಾದ ಬಂಗಾರಪೇಟೆ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ತಾಲ್ಲೂಕಿನ ಕದಿರೆಗೌಡನಪಾಳ್ಯ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

ಕೊರಟಗೆರೆ ತಾಲ್ಲೂಕು ಬುಕ್‌ಪಟ್ನ ಅವರ ಸ್ವಂತ ಗ್ರಾಮ. ಆದರೆ ಪತ್ನಿ ಗ್ರಾಮವಾದ ಕದಿರೆಗೌಡನಪಾಳ್ಯದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಸಚಿವರಾದ ಜೆ.ಸಿ.ಮಾಧುಸ್ವಾಮಿ, ಎಚ್‌.ನಾಗೇಶ್, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸೇರಿದಂತೆ ವಿವಿಧ ಹಂತದ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು. ಬೆಳಿಗ್ಗೆ ಪಾರ್ಥಿವ ಶರೀರವನ್ನು ತುಮಕೂರು ನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಂತಿಮ ದರ್ಶನ ಪಡೆದರು.

ADVERTISEMENT

ಸಚಿವ ಎಚ್.ನಾಗೇಶ್ ಮಾತನಾಡಿ, ‘ಈ ಘಟನೆ ಅತ್ಯಂತ ಅಮಾನುಷವಾದುದು. ಪ್ರಾಮಾಣಿಕ, ಮಾನವೀಯ ವ್ಯಕ್ತಿತ್ವದ ಅಧಿಕಾರಿಯನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಅವರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಜತೆಗೆ ಮಗನಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಸರ್ಕಾರಿ ಕೆಲಸ ಮಾಡುವ ಅಧಿಕಾರಿಗಳಿಗೆ ರಕ್ಷಣೆ ನೀಡುವುದು ಸರ್ಕಾರದ ಮೊದಲ ಆದ್ಯತೆ’ ಎಂದರು.

ಮುಂದಿನ ದಿನಗಳಲ್ಲಿ ಈ ರೀತಿ ದುರ್ಘಟನೆಗಳು ನಡೆಯದಂತೆ ಕಾನೂನು ರೂಪಿಸಿ ಎಂದು ತಹಶೀಲ್ದಾರ್ ಕುಟುಂಬ ಸದಸ್ಯರು ಸಚಿವರಲ್ಲಿ ಅಳಲುತೋಡಿಕೊಂಡರು.

ಸಚಿವ ಜಿ.ಸಿ ಮಾಧುಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು. ಅಂತ್ಯಕ್ರಿಯೆ ಮುಗಿಯುವವರೆಗೂ ಸರ್ಕಾರಿ ನೌಕರರು ಕಪ್ಪು ಬಟ್ಟೆಯ ಪಟ್ಟಿ ಕಟ್ಟಿಕೊಂಡ್ಡಿದ್ದರು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ, ಉಪವಿಭಾಗಾಧಿಕಾರಿ ಸೋಮಶೇಖರ್, ಕೋಲಾರ ಸಂಸದ ಮುನಿಸ್ವಾಮಿ, ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಉಪವಿಭಾಗಾಧಿಕಾರಿ ಅಜಯ್ ಕುಮಾರ್, ತಹಶೀಲ್ದಾರ್ ಜಿ.ವಿ.ಮೋಹನ್ ಕುಮಾರ್, ಡಾ.ಪ್ರದೀಪ್ ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ, ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹರಾಜು, ಕಂದಾಯ ನಿರೀಕ್ಷಕ ರಮೇಶ್, ಕೆ.ವಿ.ನಾರಾಯಣ್, ನಾಗಭೂಷಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.