
ತುಮಕೂರು: ನಗರದ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕೊಕ್ಕೊ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕದ ಪುರುಷ, ಮಹಿಳಾ ತಂಡಗಳು ಗೆಲುವಿನ ಓಟ ಮುಂದುವರಿಸಿದ್ದು, ಸೆಮಿಫೈನಲ್ ಪ್ರವೇಶಿಸಿವೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಜ್ಯ ಪುರುಷರ ತಂಡ ಒಂದು ಅಂಕದಿಂದ ಕೇರಳ ತಂಡ ಸೋಲಿಸಿ ಸೆಮಿಫೈನಲ್ ತಲುಪಿತು. 10–11 ಪಾಯಿಂಟ್ಸ್‌ಗಳಿಂದ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಿತು. ಪಂದ್ಯದ ಕೊನೆಯ ಕ್ಷಣದ ತನಕ ಕುತೂಹಲ ಮೂಡಿಸಿತ್ತು. ಎರಡೂ ತಂಡಗಳ ಆಟಗಾರರು ತಮ್ಮ ಸಾಮರ್ಥ್ಯ ಪರೀಕ್ಷೆಗೆ ಒಡ್ಡಿದರು. ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದರು. ರಾಜ್ಯದ ಆಟಗಾರರಾದ ಮಲ್ಲಿಕಾರ್ಜುನ, ಸುದೀಪ್, ಮೌನೇಶ್ ಅವರ ಆಟ ತಂಡಕ್ಕೆ ಗೆಲುವು ತಂದು ಕೊಟ್ಟಿತು.
ಮಂಗಳವಾರ ಬೆಳಿಗ್ಗೆ ನಡೆಯುವ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ ಚಂಡೀಗಢ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಒಡಿಶಾ ಮತ್ತು ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ. ಮಧ್ಯಾಹ್ನದ ನಂತರ ಫೈನಲ್ ಪಂದ್ಯ ನಡೆಯಲಿದೆ.
ಮಹಿಳಾ ತಂಡ: ಮಹಿಳೆಯರ ರಾಜ್ಯ ತಂಡವು ಟೂರ್ನಿಯ ಆರಂಭದಿಂದ ಉತ್ತಮ ಲಯದಲ್ಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಒಡಿಶಾ ವಿರುದ್ಧ ಇನ್ನಿಂಗ್ಸ್ ಹಾಗೂ 3 ಅಂಕಗಳಿಂದ ಗೆದ್ದು ಬೀಗಿತು. ತನುಜಾ, ನದಿಯಾ ಉತ್ತಮ ಆಟ ಪ್ರದರ್ಶಿಸಿದರು. ಸೆಮಿಫೈನಲ್‌ನಲ್ಲಿ ರಾಜ್ಯದ ತಂಡಕ್ಕೆ ತಮಿಳುನಾಡು ಎದುರಾಳಿ. ಇನ್ನೊಂದು ಪಂದ್ಯದಲ್ಲಿ ಹರಿಯಾಣ ಮತ್ತು ಪಂಜಾಬ್ ತಂಡಗಳು ಗೆಲುವಿಗಾಗಿ ಕಾದಾಡಲಿವೆ.
ಕೊಕ್ಕೊ ಇಂಡಿಯಾ, ರಾಜ್ಯ ಅಮೆಚೂರ್ ಕೊಕ್ಕೊ ಅಸೋಸಿಯೇಷನ್ ವತಿಯಿಂದ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ. ಮಂಗಳವಾರ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.