ADVERTISEMENT

ರಾಜಣ್ಣ ಕಾಂಗ್ರೆಸ್ ತೊರೆಯಲು ಸಜ್ಜಾದರಾ?

ಪಕ್ಷದ ವಿರುದ್ಧ ನಿರಂತರ ವಾಗ್ದಾಳಿ; ಬಿಜೆಪಿ, ಜೆಡಿಎಸ್‌ನಲ್ಲಿ ಯಾವುದು ಹಿತ?

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 4:57 IST
Last Updated 14 ನವೆಂಬರ್ 2025, 4:57 IST
ಕೆ.ಎನ್‌.ರಾಜಣ್ಣ
ಕೆ.ಎನ್‌.ರಾಜಣ್ಣ   

ತುಮಕೂರು: ಕಾಂಗ್ರೆಸ್‌ ಹಿರಿಯ ನಾಯಕ, ಸತತ ಆರನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಮಾತು, ನಡೆ–ನುಡಿ ಗಮನಿಸಿದರೆ ಪಕ್ಷ ಬಿಡಲು ಮಾನಸಿಕವಾಗಿ ಸಜ್ಜಾಗುತ್ತಿದ್ದಾರೆ? ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ.

‘ಮುಂದೆ ಯಾವ ಪಕ್ಷದ ಬಾವುಟ ಹಿಡಿಯುತ್ತೇನೊ ಗೊತ್ತಿಲ್ಲ. 2004ರಲ್ಲಿ ಜೆಡಿಎಸ್‌ನಿಂದ ಶಾಸಕನಾಗಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿತ್ತು. ಮುಂದೆ ಅಂತಹ ಪರಿಸ್ಥಿತಿ ಬರಬಹುದು’ ಎಂದು ಹೇಳುವ ಮೂಲಕ ಪಕ್ಷದ ಹೈಕಮಾಂಡ್‌ಗೆ ತಮ್ಮ ‘ಶಕ್ತಿ’ ರೂಪದಲ್ಲಿ ಬೇರೊಂದು ಸಂದೇಶ ರವಾನಿಸಿದ್ದಾರೆ.

ಮಧುಗಿರಿ ತಾಲ್ಲೂಕಿನ ದೊಡ್ಡೇರಿಯಲ್ಲಿ ನಡೆದ ಬೈಕ್ ರ್‍ಯಾಲಿಯಲ್ಲಿ ಕಾಂಗ್ರೆಸ್ ಬಾವುಟ ಮರೆಯಾಗಿರುವ ವಿಚಾರವನ್ನು ಅವರೇ ಪ್ರಸ್ತಾಪಿಸಿದ್ದಾರೆ. ರಾಜಣ್ಣ ಗಮನಕ್ಕೆ ಬಾರದೆ, ಅವರ ‘ನಿರ್ದೇಶನ’ ಇಲ್ಲದೆ ಪಕ್ಷದ ಬಾವುಟ ಬಿಟ್ಟು ರ್‍ಯಾಲಿ ನಡೆಸಲು ಸಾಧ್ಯವೆ? ಎಂಬುದು ರಾಜಕೀಯದ ‘ಅ, ಇ’ ಗೊತ್ತಿಲ್ಲದವರಿಗೂ ಅರ್ಥವಾಗುತ್ತದೆ. ಪಕ್ಷದಲ್ಲಿ ‘ಅವಕಾಶ ಕೊಟ್ಟು’ ಉಳಿಸಿಕೊಳ್ಳಬೇಕು. ಇಲ್ಲವಾದರೆ ಪಕ್ಷದ ಸ್ಥಿತಿ ‘ಈ ರೀತಿ’ ಆಗುತ್ತದೆ ಎಂಬ ಎಚ್ಚರಿಕೆಯನ್ನು ತಲುಪಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಎಲ್ಲಿಂದ...?: ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪರವಾಗಿ ಸದಾ ನಿಲ್ಲುತ್ತಾರೆ ಎಂಬ ಹುಂಬತನದಿಂದ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರನ್ನು ಸಮಯ ಸಿಕ್ಕಾಗಲೆಲ್ಲ ಕುಟುಕುತ್ತಲೇ ಬಂದಿದ್ದರು. ಮತ ಕಳವು ವಿಚಾರದಲ್ಲಿ ನೀಡಿದ್ದ ಹೇಳಿಕೆ ಸಚಿವ ಸ್ಥಾನಕ್ಕೆ ಕಿತ್ತು ತಂದಿತ್ತು. ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯುವ ಬದಲಿಗೆ ವಜಾ ಮಾಡುವಂತಹ ಕಠಿಣ ಸಂದೇಶವನ್ನು ಹೈಕಮಾಂಡ್ ನೀಡಿತ್ತು. ನಂತರದ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಸಹ ಅವರ ಪರ ನಿಲ್ಲಲು ಸಾಧ್ಯವಾಗುತ್ತಿಲ್ಲ. ಹೈಕಮಾಂಡ್ ಮಾತು ಮೀರಿ ನಡೆದುಕೊಳ್ಳುವುದು ಅವರಿಗೂ ಕಷ್ಟಕರವಾಗುತ್ತಿದೆ.

ಜಿಲ್ಲೆಯ ಕಾಂಗ್ರೆಸ್ ನಾಯಕರೂ ಒಟ್ಟಾಗಿ ರಾಜಣ್ಣ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಸಚಿವ ಸ್ಥಾನ ಕಳೆದುಕೊಂಡ ನಂತರ ಸಚಿವ ಜಿ.ಪರಮೇಶ್ವರ ಅಂತರ ಕಾಯ್ದುಕೊಂಡಿದ್ದಾರೆ. ಮತ್ತೊಬ್ಬ ಹಿರಿಯ ನಾಯಕರಾದ ಶಿರಾ ಶಾಸಕ ಟಿ.ಬಿ.ಜಯಚಂದ್ರ ನಡುವಿನ ಸಂಬಂಧ ಮೊದಲಿನಿಂದಲೂ ಅಷ್ಟಕಷ್ಟೇ. ತುಮುಲ್ ಅಧ್ಯಕ್ಷರ ಚುನಾವಣೆ ನಂತರ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಅವರ ಮುಖವನ್ನೇ ನೋಡುತ್ತಿಲ್ಲ. ಡಿ.ಕೆ.ಶಿವಕುಮಾರ್ ವಿರೋಧದಿಂದಾಗಿ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಸಹ ದೂರವೇ ಉಳಿದಿದ್ದಾರೆ. ತಿಪಟೂರು ಶಾಸಕ ಕೆ.ಷಡಕ್ಷರಿ ಅವರು ರಾಜಣ್ಣ ಅವರಿಗೆ ತಪ್ಪಿರುವ ಅಧಿಕಾರ ತಮಗೆ ಸಿಗಬಹುದು ಎಂದು ಕಾಯುತ್ತಿದ್ದಾರೆ. ಇನ್ನು ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ತುಮುಲ್ ಅಧ್ಯಕ್ಷ ಸ್ಥಾನ ನೀಡಿರುವ ಕಾರಣಕ್ಕೆ ಜತೆಯಲ್ಲಿದ್ದಾರೆ.

ರಾಜ್ಯ ಹಾಗೂ ಜಿಲ್ಲೆಯ ನಾಯಕರಿಂದಲೂ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿಲ್ಲ. ನನ್ನನ್ನು ಒಬ್ಬಂಟಿ ಮಾಡಿದರೆ? ಎಂಬ ಆತಂಕವೂ ಕಾಡುತ್ತಿದೆ. ಹೈಕಮಾಂಡ್ ಮತ್ತೊಮ್ಮೆ ಸಚಿವ ಸ್ಥಾನ ದಯಪಾಲಿಸುವ ಸಾಧ್ಯತೆ ಕಡಿಮೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯನ್ನು ಇಟ್ಟುಕೊಂಡೇ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಂದೆ ಸಚಿವ ಸ್ಥಾನ ಸಿಗದಿದ್ದರೂ ತಮ್ಮ ಪುತ್ರ ಆರ್.ರಾಜೇಂದ್ರ ಅವರಿಗೆ ರಾಜಕೀಯ ಭವಿಷ್ಯ ರೂಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಅವರ ಆಪ್ತ ಬಳಗದಿಂದ ಕೇಳಿ ಬರುತ್ತಿರುವ ಮಾತುಗಳು.

ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಾ ಬಂದಿದ್ದು, ಈಗ ಮತ್ತೊಂದು ಅವಧಿಗೆ ಸ್ಪರ್ಧಿಸುವ ಬಯಕೆಯನ್ನು ತಮ್ಮ ಬೆಂಬಲಿಗರ ಬಳಿ ವ್ಯಕ್ತಪಡಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಆರ್.ರಾಜೇಂದ್ರ ವಿಧಾನ ಪರಿಷತ್ ಸದಸ್ಯತ್ವದ ಅವಧಿಯೂ ಮುಗಿದಿರುತ್ತದೆ. ಮಧುಗಿರಿ ಕ್ಷೇತ್ರವನ್ನು ಬಿಟ್ಟುಕೊಟ್ಟು, ರಾಜೇಂದ್ರ ಅವರಿಗೆ ಅಲ್ಲಿಂದ ಟಿಕೆಟ್ ನೀಡುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಪಕ್ಕದ ಚಳ್ಳಕೆರೆ ಕ್ಷೇತ್ರದಿಂದ ತಮಗೆ ಅವಕಾಶ ನೀಡುವಂತೆ ಬೇಡಿಕೆ ಸಲ್ಲಿಸುವುದು. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕರೆ ಪಕ್ಷದಲ್ಲಿ ಉಳಿಯುವುದು. ಇಲ್ಲವಾದರೆ ಪರ್ಯಾಯ ಚಿಂತನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್, ಕಾಂಗ್ರೆಸ್... ಮುಂದೆ?

ಕಾಂಗ್ರೆಸ್‌ನಿಂದ ರಾಜಣ್ಣ ರಾಜಕೀಯ ಜೀವನ ಆರಂಭಿಸಿ ಯುವ ಕಾಂಗ್ರೆಸ್ ಮೂಲಕ ಪಕ್ಷದಲ್ಲಿ ರಾಜಕೀಯ ನೆಲೆ ಕಂಡುಕೊಂಡರು. 1998ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾದರು. 2004ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ (ಈಗ ಕ್ಷೇತ್ರ ಇಲ್ಲ) ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಟಿಕೆಟ್ ಸಿಗಲಿಲ್ಲ. ಆಗ ಜೆಡಿಎಸ್ ಸೇರಿ ಬೆಳ್ಳಾವಿಯಿಂದ ಶಾಸಕರಾದರು. ಕ್ಷೇತ್ರ ಪುನರ್ ವಿಂಗಡಣೆ ನಂತರ ಬೆಳ್ಳಾವಿ ಕ್ಷೇತ್ರ ಇಲ್ಲವಾಯಿತು. ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿದ್ದ ಮಧುಗಿರಿಯತ್ತ ಮುಖ ಮಾಡಿದರು. 2013ರಲ್ಲಿ ಶಾಸಕರಾಗಿ ಆಯ್ಕೆಯಾದರು. ಪ್ರಸ್ತುತ ಅವಧಿಯ ವಿಧಾನಸಭೆಗೂ ಆಯ್ಕೆಯಾಗಿ ಸಚಿವರಾಗಿದ್ದರು. ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಜೆಡಿಎಸ್ ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿದ್ದು ಮುಂದಿನ ನಡೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಬಿಜೆಪಿ ಬೆಂಬಲದೊಂದಿಗೆ ಮಧುಗಿರಿಯಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಪರವಾದ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಇದಕ್ಕೆ ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಜತೆಗೆ ಪಕ್ಷದ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಜತೆಗೆ ಪರಮೇಶ್ವರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡಲಾರಂಭಿಸಿದ್ದಾರೆ. ಮೀಸಲು ಕ್ಷೇತ್ರವನ್ನು ಪರಮೇಶ್ವರ ಬಿಟ್ಟುಕೊಡಬೇಕು ಎಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಪರಮೇಶ್ವರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಬಿಜೆಪಿ ನಗರ ಶಾಸಕ ಜ್ಯೋತಿಗಣೇಶ್ ಅವರಿಗೆ ಸಾರ್ವಜನಿಕ ವೇದಿಕೆಯಲ್ಲೇ ಹೇಳಿದ್ದರು. ಈ ಎಲ್ಲ ಬೆಳವಣಿಗೆ ಮಾತು ಗಮನಿಸಿದರೆ ರಾಜಣ್ಣ ಮುಂದಿನ ನಡೆ ಏನಿರಬಹುದು...?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.