ADVERTISEMENT

ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್- ಬಿಜೆಪಿ ಮುಖಂಡರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 12:06 IST
Last Updated 16 ಏಪ್ರಿಲ್ 2020, 12:06 IST
ಕೋರ ಹೋಬಳಿ ಕೆಸ್ತೂರು ಗ್ರಾಮದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ವಾಗ್ವಾದ ನಡೆಯಿತು
ಕೋರ ಹೋಬಳಿ ಕೆಸ್ತೂರು ಗ್ರಾಮದಲ್ಲಿ ಶಾಸಕ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ವಾಗ್ವಾದ ನಡೆಯಿತು   

ಕೋರ: ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತನ ನಡುವೆ ವಾಗ್ವಾದ ನಡೆಯಿತು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕ್ಷೇತ್ರ ಪ್ರವಾಸ ಕೈಗೊಂಡಿದ್ದ ಶಾಸಕ ಡಾ.ಜಿ.ಪರಮೇಶ್ವರ ಕೆಸ್ತೂರು ಗ್ರಾಮದಲ್ಲಿ ಜನಸಾಮಾನ್ಯರ ಸಮಸ್ಯೆ ಆಲಿಸುವ ವೇಳೆ ಬಿಜೆಪಿ ಕಾರ್ಯಕರ್ತ ರವಿ ಕೆಸ್ತೂರು ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ. ಈ ಬಗ್ಗೆ ಗಮನ ಹರಿಸಿ ಎಂದು ಶಾಸಕರಿಗೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಮಧ್ಯ ಪ್ರವೇಶಿಸಿ, ‘ಶಾಸಕರು ನಮ್ಮ ಗ್ರಾಮಕ್ಕೆ ಬಂದಾಗಲೆಲ್ಲಾ ತಕರಾರು ಮಾಡುತ್ತೀಯ. ನಿಮ್ಮ ಬಿಜೆಪಿ ಸಂಸದರು ನಮ್ಮ ಗ್ರಾಮಕ್ಕೆ ಎಷ್ಟು ಸಾರಿ ಬಂದಿದ್ದಾರೆ. ಕೊರೊನಾ ವೈರಸ್ ಬಂದು ಜನ ಸಂಕಷ್ಟದಲ್ಲಿರುವುದು ಅವರ ಗಮನಕ್ಕೆ ಬಂದಿಲ್ಲವೇ’ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ಗ್ರಾಮದ ಇತರೆ ಕಾಂಗ್ರೆಸ್ ಮುಖಂಡರು ಸಂಸದರು ಬಂದು ಜನರ ಕಷ್ಟ ಆಲಿಸುವಂತೆ ಒತ್ತಾಯಿಸಿದರು.

ADVERTISEMENT

‘ನಮ್ಮ ಶಾಸಕರು ಕ್ಷೇತ್ರ ಪ್ರವಾಸ ಮಾಡಿ ಮಾಸ್ಕ್ ಹಂಚುತ್ತಿದ್ದಾರೆ. ನಿಮ್ಮ ಸಂಸದರು ಕೊರೊನಾ ಬಂದ ಮೇಲೆ ಕ್ಷೇತ್ರದ ಕಡೆ ತಲೆ ಹಾಕಿಲ್ಲ. ಬಂದು ಜನರ ಕಷ್ಟ ಆಲಿಸಲು ಹೇಳಿ’ ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಶಾಸಕ ಡಾ.ಜಿ.ಪರಮೇಶ್ವರ ಕಾರು ಹತ್ತಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.