ADVERTISEMENT

ಕೊರಟಗೆರೆ: ಉದ್ಘಾಟನೆಗೂ ಮುನ್ನವೇ ಅವಸಾನದಂಚಿಗೆ ಗರಡಿ ಮನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:12 IST
Last Updated 7 ಫೆಬ್ರುವರಿ 2026, 6:12 IST
ಉದ್ಘಾಟನೆಗೂ ಮುನ್ನವೇ ನಿರುಪಯುಕ್ತವಾಗಿ ಅವಸಾನದಂಚಿಗೆ ತಲುಪಿರುವ ಗರಡಿ ಮನೆ 
ಉದ್ಘಾಟನೆಗೂ ಮುನ್ನವೇ ನಿರುಪಯುಕ್ತವಾಗಿ ಅವಸಾನದಂಚಿಗೆ ತಲುಪಿರುವ ಗರಡಿ ಮನೆ    

ಕೊರಟಗೆರೆ: ತಾಲ್ಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಅವಿಭಾಜ್ಯ ಅಂಗವಾಗಿರುವ ಕುಸ್ತಿ ಕ್ರೀಡೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ 2011–12ನೇ ಸಾಲಿನಲ್ಲಿ ₹17ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಗರಡಿ ಮನೆ, ಉದ್ಘಾಟನೆಯಾಗುವ ಮೊದಲೇ ಅವಸಾನದಂಚಿಗೆ ತಲುಪಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಇಂದಿಗೂ ಜಟ್ಟಿಗಳು (ಪೈಲ್ವಾನ್‌ಗಳು) ಇದ್ದರೂ ಅವರ ಅಭ್ಯಾಸಕ್ಕೆ ಸೂಕ್ತವಾದ ಗರಡಿ ಸೌಲಭ್ಯ ಇಲ್ಲದ ಕಾರಣ ಗ್ರಾಮೀಣ ಸೊಗಡಿನ ಈ ಪಾರಂಪರಿಕ ಕ್ರೀಡೆ ನಾಶವಾಗುವ ಹಂತಕ್ಕೆ ತಲುಪಿದೆ. ಅನೇಕ ಯುವಕರಿಗೆ ಕುಸ್ತಿ ಮೇಲೆ ಆಸಕ್ತಿ ಇದ್ದರೂ ಸೂಕ್ತ ಪ್ರೋತ್ಸಾಹ ಮತ್ತು ವ್ಯವಸ್ಥೆ ಕೊರತೆಯಿಂದ ಹೊಸ ಕುಸ್ತಿಪಟುಗಳ ತಯಾರಿ ಕುಂಠಿತವಾಗುತ್ತಿದೆ.

ತಾಲ್ಲೂಕಿಗೆ ಗರಡಿ ಕುಸ್ತಿಗೆ ತನ್ನದೇ ಆದ ಇತಿಹಾಸವಿದೆ. ಈ ಕಾರಣದಿಂದಲೇ ಪಟ್ಟಣದಲ್ಲಿ ಇಂದಿಗೂ ವಿಶೇಷ ದಿನಗಳಲ್ಲಿ ಕುಸ್ತಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸ್ವತಃ ಕ್ರೀಡಾಪಟುವಾಗಿದ್ದ ಸಚಿವ ಜಿ.ಪರಮೇಶ್ವರ ಅವರು 2011–12ರಲ್ಲಿ ಗರಡಿ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದ್ದರು. ಆದರೆ, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಮತ್ತು ಲ್ಯಾಂಡ್ ಅಂಡ್ ಆರ್ಮಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕನಸಿಗೆ ತಣ್ಣೀರು ಎರಚಿದಂತಾಗಿದೆ.

ADVERTISEMENT

ಪಟ್ಟಣದ ಜೂನಿಯರ್ ಕಾಲೇಜು ಮೈದಾನದ ಬಳಿ ಗರಡಿ ಮನೆ ನಿರ್ಮಾಣದ ವೇಳೆ ನಿಯಮಾನುಸಾರ ಅಗತ್ಯವಿರುವ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂಬ ಆರೋಪವಿದೆ. ಗರಡಿ ಮನೆ ಎಂದರೆ ವಿಶಾಲವಾದ, ಮಣ್ಣು ಸಮತಟ್ಟಾದ ನೆಲವಿರುವ ತೆರೆಯಾದ ಕಟ್ಟಡವಾಗಿರಬೇಕು. ಆದರೆ, ಇಲ್ಲಿ ಕಟ್ಟಡದ ಮಧ್ಯಭಾಗದಲ್ಲೇ ಪಿಲ್ಲರ್‌ಗಳನ್ನು ನಿರ್ಮಿಸಿ, ಕುಸ್ತಿ ಅಭ್ಯಾಸಕ್ಕೆ ಅಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಜತೆಗೆ ನೆಲಹಾಸಿಗೆ ಬೇಕಾದ ಸೌಲಭ್ಯ ಒದಗಿಸಿಲ್ಲ.

ಈ ಕಾರಣಗಳಿಂದಾಗಿ ₹17ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಪ್ರತೀಕವಾಗಿಯೇ ನಿಂತಿದೆ. ಲ್ಯಾಂಡ್ ಅಂಡ್ ಆರ್ಮಿ ಇಲಾಖೆ ಕಾಮಗಾರಿ ತಾಂತ್ರಿಕ ಅರಿವು ಇಲ್ಲದ ವರ್ಕ್ ಇನ್ ಸ್ಪೆಕ್ಟರ್‌ ಒಬ್ಬರು ಈ ಕಾಮಗಾರಿ ನಿರ್ವಹಿಸಿರುವುದರಿಂದ ‘ಗರಡಿ ಮನೆ’ ಎನ್ನುವ ಕಲ್ಪನೆಯೇ ಇಲ್ಲದಂತೆ ಕಟ್ಟಡ ನಿರ್ಮಿಸಿ ಹಾಳು ಬಿಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇತಿಹಾಸ ಪರಂಪರೆ ಕುಸ್ತಿ ಕ್ರೀಡೆಯನ್ನು ಉಳಿಸಿ ಬೆಳೆಸಬೇಕಾದ ಇಲಾಖೆಗಳೇ ನಿರ್ಲಕ್ಷ್ಯ ತೋರಿದ ಪರಿಣಾಮ ಗರಡಿ ಮನೆ ಅವಸಾನದಂಚಿಗೆ ತಲುಪಿದೆ. ಕೂಡಲೇ ತಾಂತ್ರಿಕ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು, ಗರಡಿ ಮನೆಗೆ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಸಾರ್ವಜನಿಕರು ಮತ್ತು ಕ್ರೀಡಾಭಿಮಾನಿಗಳು ಆಗ್ರಹಿಸಿದ್ದಾರೆ.

ಗರಡಿ ಮನೆ ಅಂತ ಕಟ್ಟಿದರು. ಅದು ನೋಡಿದರೆ ಸಭಾಭವನದಂತಿದೆ. ಮಧ್ಯದಲ್ಲಿ ಪಿಲ್ಲರ್ ಹಾಕಿ ಮಣ್ಣು ಹಾಸದೆ ಕಟ್ಟಡ ಮಾಡಿದರೆ ಎಲ್ಲಿ ಕುಸ್ತಿ ಅಭ್ಯಾಸ ಮಾಡೋದು? ಇದರಿಂದ ಜೀವನವೇ ಹಾಳಾಗುತ್ತಿದೆ.
ಪೈಲ್ವಾನ್ ಸಿದ್ದರಾಜು, ಕುಸ್ತಿಪಟು
ಸರ್ಕಾರ ಹಣ ಕೊಟ್ಟಿದೆ. ಆದರೆ ಅಧಿಕಾರಿಗಳು ಮನಸ್ಸಿಟ್ಟು ಕೆಲಸ ಮಾಡಿಲ್ಲ. ಈಗಿನ ಕಟ್ಟಡ ನೋಡಿದರೆ ಮನಸ್ಸು ಮುರಿದು ಹೋಗುತ್ತದೆ.
ಮಂಜುನಾಥ ಪೈಲ್ವಾನ್, ಕೊರಟಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.