ADVERTISEMENT

ತುಮಕೂರು | ಕೊತ್ತಗೆರೆ ಏತ ನೀರಾವರಿಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:54 IST
Last Updated 6 ಡಿಸೆಂಬರ್ 2025, 6:54 IST
ಏತ ನೀರಾವರಿ ಯೋಜನೆ (ಸಾಂದರ್ಭಿಕ ಚಿತ್ರ)
ಏತ ನೀರಾವರಿ ಯೋಜನೆ (ಸಾಂದರ್ಭಿಕ ಚಿತ್ರ)   

ತುಮಕೂರು: ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಸಮೀಪದ ಭಕ್ತರಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದರಿಂದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣ ಖಚಿತವಾದಂತಾಗಿದೆ.

ಹೇಮಾವತಿ ನಾಲೆಯಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣ ಮಾಡಿ ಕುಣಿಗಲ್ ತಾಲ್ಲೂಕಿಗೆ ನೀರು ಹರಿಸುವ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾಕಷ್ಟು ವಿವಾದಕ್ಕೆ ಸಿಲುಕಿದ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿತ್ತು.

ಈಗ ಭಕ್ತರಹಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ಮುಂದಾಗಿದ್ದು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣ ಸಹ ಆರಂಭವಾಗುವ ಸೂಚನೆ ಸಿಕ್ಕಿದಂತಾಗಿದೆ. ಗುಬ್ಬಿ ತಾಲ್ಲೂಕಿನ ನಾಲೆಯಿಂದ ಭಕ್ತರಹಳ್ಳಿ ಕೆರೆಗೆ ನೀರು ಹರಿಸಿ, ಅಲ್ಲಿಂದ ಇತರ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.

ADVERTISEMENT

ಭಕ್ತರಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕುಣಿಗಲ್ ತಾಲ್ಲೂಕಿನ 21 ಕೆರೆಗಳಿಗೆ ನೀರು ಹರಿಸಲು ₹34 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ಚುರುಕು ಪಡೆದುಕೊಳ್ಳಲಿದೆ.

ತ್ಯಾಜ್ಯ ಘಟಕ ಗುತ್ತಿಗೆ: ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡುವ ತ್ಯಾಜ್ಯ ಘಟಕವನ್ನು 25 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ನಗರದಲ್ಲಿ ಪ್ರತಿ ನಿತ್ಯ 125ರಿಂದ 150 ಟನ್‌ಗಳಷ್ಟು ಹಸಿ ಕಸ ಸಂಗ್ರಹವಾಗುತ್ತಿದೆ. ಪಾಲಿಕೆಗೆ ಸೇರಿದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 10 ಎಕರೆಯಷ್ಟು ಜಾಗವನ್ನು ಭಾರತೀಯ ಅನಿಲ ಪ್ರಾಧಿಕಾರ ಲಿಮಿಟೆಡ್ (ಗೇಲ್) ಅಥವಾ ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ.

ಸಾಮಾನ್ಯ ಗುತ್ತಿಗೆ ದರವನ್ನು ನಿಗದಿಪಡಿಸಿ 10 ಎಕರೆಯನ್ನು 25 ವರ್ಷಗಳಿಗೆ ಗುತ್ತಿಗೆ ನೀಡಲಾಗುತ್ತದೆ. ಇದರಿಂದ ಗೇಲ್, ಎಂಜಿಎಲ್ ಸಂಸ್ಥೆಗಳು ನಗರದ ತ್ಯಾಜ್ಯ ಸಂಸ್ಕರಣೆ ಮಾಡುವ ಜವಾಬ್ದಾರಿ ನಿರ್ವಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.