ADVERTISEMENT

KPS ಮ್ಯಾಗ್ನೆಟ್‌ ಯೋಜನೆಗೆ ತೀವ್ರ ವಿರೋಧ; ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:11 IST
Last Updated 2 ಮಾರ್ಚ್ 2026, 6:11 IST
ತುಮಕೂರಿನಲ್ಲಿ ಭಾನುವಾರ ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿದರು. ಪರಿಸರವಾದಿ ಸಿ.ಯತಿರಾಜು, ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್‌.ಅಶ್ವಿನಿ, ಉಪಾಧ್ಯಕ್ಷೆ ಅಪೂರ್ವ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಭಾನುವಾರ ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿದರು. ಪರಿಸರವಾದಿ ಸಿ.ಯತಿರಾಜು, ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್‌.ಅಶ್ವಿನಿ, ಉಪಾಧ್ಯಕ್ಷೆ ಅಪೂರ್ವ ಇತರರು ಉಪಸ್ಥಿತರಿದ್ದರು   

ತುಮಕೂರು: ಕೆಪಿಎಸ್‌ ಮ್ಯಾಗ್ನೆಟ್‌ ಹೆಸರಿನಲ್ಲಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ನಗರದ ಟೌನ್‌ಹಾಲ್‌ ವೃತ್ತದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಯಾವುದೇ ಕಾರಣಕ್ಕೂ ಶಾಲೆ ಮುಚ್ಚಲು ಬಿಡುವುದಿಲ್ಲ ಎಂಬ ಘೋಷಣೆ ಮೊಳಗಿತು. ಸುಮಾರು 40 ಹಳ್ಳಿಗಳ ನೂರಾರು ಜನ ಪಾಲ್ಗೊಂಡಿದ್ದರು. ಸರ್ಕಾರ ಯೋಜನೆ ಹಿಂಪಡೆದು ಅಧಿಕೃತವಾಗಿ ಆದೇಶ ಹೊರಡಿಸುವವರೆಗೂ ಈ ಹೋರಾಟ ನಿಲ್ಲಿಸುವುದಿಲ್ಲ. ಜಿಲ್ಲೆಯ ಮೂಲೆ ಮೂಲೆಗೂ ಪ್ರತಿರೋಧದ ಚಳವಳಿ ಹರಡುತ್ತದೆ ಎಂದು ಎಚ್ಚರಿಸಿದರು.

‘ಕೆಪಿಎಸ್‌ ಮ್ಯಾಗ್ನೆಟ್‌ ವಿರುದ್ಧದ ಹೋರಾಟ ತೀವ್ರಗೊಳಿಸಬೇಕು. ಸರ್ಕಾರಿ ಶಾಲೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಈಗ ಜ್ಯೋತಿ ಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರಿಗೆ ಕಾಯುವುದು ಬೇಡ. ನಾವೇ ಹೋರಾಟ ಕಟ್ಟಬೇಕು’ ಎಂದು ಲೇಖಕಿ ಬಾ.ಹ.ರಮಾಕುಮಾರಿ ಕರೆ ನೀಡಿದರು.

ADVERTISEMENT

ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್‌.ಅಶ್ವಿನಿ, ‘ಕೆಪಿಎಸ್‌ ಮ್ಯಾಗ್ನೆಟ್‌ ಯೋಜನೆಗೆ ಸರ್ಕಾರ ಏಷಿಯನ್ ಡೆವಲಪ್‌ಮೆಂಟ್‌ ಬ್ಯಾಂಕ್‌ನಿಂದ ಎರಡೂವರೆ ಸಾವಿರ ಕೋಟಿ ಸಾಲ ಮಾಡಿದೆ. ಇದರಿಂದ ಬಡ, ರೈತ, ಕಾರ್ಮಿಕರ ಮಕ್ಕಳು ಬೀದಿಗೆ ಬರುತ್ತಾರೆ. ಶಿಕ್ಷಣ ಕಸಿದುಕೊಳ್ಳುವ ಮೂಲಕ ಅವರನ್ನು ಅಂಧಕಾರಕ್ಕೆ ತಳ್ಳುತ್ತಿದೆ’ ಎಂದರು.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶೇ 30 ರಷ್ಟು ಅನುದಾನ ಶಿಕ್ಷಣಕ್ಕೆ ಮೀಸಲಿಡಬೇಕು. ಶಾಲೆ ಉಳಿಸಬೇಕು. ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪರಿಸರವಾದಿ ಸಿ.ಯತಿರಾಜು, ‘ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು. ಆದರೆ ಕೆಪಿಎಸ್‌ ಮ್ಯಾಗ್ನೆಟ್ ಯೋಜನೆ ಬಡವರು ಮಾತ್ರವಲ್ಲದೆ, ಮಧ್ಯಮ ವರ್ಗದ ಮಕ್ಕಳಿಂದ ಶಿಕ್ಷಣ ಕಸಿಯುವ ಹುನ್ನಾರವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ 92 ಜನರನ್ನು ಒಳಗೊಂಡ ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಸಿ.ಬಿ.ಲಕ್ಕಪ್ಪ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಸಂಘಟನೆಗಳ ಮುಖಂಡರಾದ ರತ್ನಮ್ಮ, ಮಂಜುಳಾ ಗೋನವಾರ, ಲೋಕೇಶ್, ಶ್ರೀನಿವಾಸ ಮೂರ್ತಿ, ನವರತ್ನನ್‌, ಮಮತಾ, ಮೊಹಾಸಿನ್‌ ಬಾನು, ಅನುಪಮಾ, ಭರತ್‌, ಸೈಯದ್‌, ವೃಷಭ್‌, ಸಂದೀಪ್‌, ಹುಸೇನಪ್ಪ, ಭೂತೇಶ ಇತರರು ಭಾಗವಹಿಸಿದ್ದರು.

ಶಿಕ್ಷಣ ಕಸಿಯುವ ನಿರ್ಧಾರ

‘ರೈತ ಕಾರ್ಮಿಕರ ಮಕ್ಕಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭಿಸಲಾಗಿದೆ. ಇದೀಗ ಗುಣಮಟ್ಟದ ಶಿಕ್ಷಣ ಎಂಬ ಹೆಸರಿನಲ್ಲಿ ಆ ಶಾಲೆ ಮುಚ್ಚಲು ಹೊರಟಿದೆ. ಗ್ರಾಮ ಪಂಚಾಯಿತಿಗೊಂದು ಕೆಪಿಎಸ್‌ ಶಾಲೆ ಮಾಡಿ ಮಕ್ಕಳ ಶಿಕ್ಷಣ ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ’ ಎಂದು ಎಐಡಿಎಸ್‌ಒ ರಾಜ್ಯ ಘಟಕದ ಉಪಾಧ್ಯಕ್ಷೆ ಅಪೂರ್ವ ಆರೋಪಿಸಿದರು. ಕೆಪಿಎಸ್ ಮ್ಯಾಗ್ನೆಟ್‌ ಯೋಜನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಯಲಿದೆ. ಯೋಜನೆ ಹಿಮ್ಮೆಟ್ಟಿಸಿ ತೀರುತ್ತೇವೆ ಎಂದರು.

ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ್ದ ಜನ