ADVERTISEMENT

ಪ್ರಜಾವಾಣಿ ವರಿದ ಪರಿಣಾಮ: ಗಡಿಭಾಗಕ್ಕೆ ಬಂತು ಸಾರಿಗೆ ಬಸ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:12 IST
Last Updated 8 ಜುಲೈ 2025, 6:12 IST
ಕೊರಟಗೆರೆಯಿಂದ ಹೊಳವನಹಳ್ಳಿ, ಬೊಮ್ಮಲದೇವಿಪುರ ಮಾರ್ಗವಾಗಿ ಆರೂಡಿಗೆ ನೂತನವಾಗಿ ಬಿಡಲಾಗಿರುವ ಸರ್ಕಾರಿ ಬಸ್
ಕೊರಟಗೆರೆಯಿಂದ ಹೊಳವನಹಳ್ಳಿ, ಬೊಮ್ಮಲದೇವಿಪುರ ಮಾರ್ಗವಾಗಿ ಆರೂಡಿಗೆ ನೂತನವಾಗಿ ಬಿಡಲಾಗಿರುವ ಸರ್ಕಾರಿ ಬಸ್   

ಕೊರಟಗೆರೆ: ಗಡಿನಾಡಿ ಗ್ರಾಮಗಳಿಗೆ ಸರಿಯಾದ ಸಾರಿಗೆ ಸಂಪರ್ಕ ಕಲ್ಪಿಸುವ ಬೇಡಿಕೆಗೆ ಅಂತಿಮವಾಗಿ ಯಶಸ್ಸು ಸಿಕ್ಕಂತಾಗಿದ್ದು, ತಾಲ್ಲೂಕಿನ ಗಡಿಭಾಗದ ಬೊಮ್ಮಲದೇವಿಪುರ, ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ ಭಾಗಕ್ಕೆ ತುಮಕೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಅಕ್ಕಾಜಿಹಳ್ಳಿ, ಚಿಕ್ಕಪಾಳ್ಯ, ಹೊಸಪಾಳ್ಯ, ದೊಡ್ಡಪಾಳ್ಯ, ಬೊಮ್ಮಲದೇವಿಪುರ, ಕರಿಚಿಕ್ಕನಹಳ್ಳಿ, ಚಿಟ್ಟೇಪಲ್ಲಿ ಪಾಳ್ಯ, ಮುದ್ದನಹಳ್ಳಿ, ಚುಂಚೇನಹಳ್ಳಿ ಗಡಿ ಭಾಗದಲ್ಲಿರುವುದರಿಂದ ಹಲವು ವರ್ಷಗಳಿಂದ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದ್ದವು. ಶಾಲಾ ಮಕ್ಕಳು, ದಿನಗೂಲಿ ಕಾರ್ಮಿಕರು, ಹಿರಿಯ ನಾಗರಿಕರು ತಮ್ಮ ದೈನಂದಿನ ಕೆಲಸಕ್ಕೆ ಹೋಗಲು ನಿತ್ಯ ತೊಂದರೆಗೊಳಗಾಗುತ್ತಿದ್ದರು. ಪರಿಸ್ಥಿತಿಯ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಆದರೆ, ಯಾವುದೇ ಪರಿಣಾಮಕಾರಿಯಾದ ಕ್ರಮಗಳು ಕೈಗೊಳ್ಳಲಾಗಿರಲಿಲ್ಲ.

ಸರಿಯಾದ ಸಾರಿಗೆ ಸಂಪರ್ಕ ಇಲ್ಲದೇ ಹೋಬಳಿ ಹಾಗೂ ತಾಲ್ಲೂಕು ಕೇಂದ್ರ ತಲುಪಲು ದಿನನಿತ್ಯ ಪರದಾಡುತ್ತಿದ್ದರು. ಸೈಕಲ್, ದ್ವಿಚಕ್ರ ವಾಹನ ಹಾಗೂ ಆಟೊಗಳೇ ಅವಲಂಬಿಸುವಂತ ಪರಿಸ್ಥಿತಿ ಇತ್ತು. ಬಹಳ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಬಹಳ ವರ್ಷಗಳಿಂದ ಬೇಡಿಕೆ ಇತ್ತು. ಈ ಬಗ್ಗೆ ‘ಪ್ರಜಾವಾಣಿ’ ವಿಸ್ತೃತ ವರದಿ ಮೂಲಕ ಗಮನ ಸೆಳೆದಿತ್ತು.

ADVERTISEMENT

ಜುಲೈ 6ರಂದು ಗಡಿನಾಡ ಹಳ್ಳಿಗೆ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಪ್ರಾರಂಭವಾಯಿತು. ಕೊರಟಗೆರೆಯಿಂದ ಹೊಳವನಹಳ್ಳಿ, ಬೊಮ್ಮಲದೇವಿಪುರ ಮಾರ್ಗವಾಗಿ ಆರೂಡಿ ವರೆಗೆ ಶಾಲಾ ಕಾಲೇಜು ವೇಳೆಯಲ್ಲಿ ಬಸ್ ಸಂಚರಿಸುತ್ತಿದ್ದು, ಈ ಭಾಗದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು. ಮೊದಲ ದಿನವೇ ಸಾರ್ವಜನಿಕರು ಬಸ್ ಬಂದ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಂಡು ‘ಕೊನೆಗೂ ನಮ್ಮೂರಿಗೆ ಬಸ್ ಬಂತು’ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಂಭ್ರಮ ಹಂಚಿಕೊಂಡರು.

‘ಪ್ರಜಾವಾಣಿ’ ಬಸ್ ವ್ಯವಸ್ಥೆಗಾಗಿ ವಿಸ್ತೃತ ವರದಿ ಮಾಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.