ADVERTISEMENT

ಕುಣಿಗಲ್: ಮಂಗಳಾ ಜಲಾಶಯ ಏರಿಯಲ್ಲಿ ಬಿರುಕು

ಕೊಚ್ಚಿಹೋದ ತೂಬಿನ ಕೆಳಭಾಗದ ಕಲ್ಲು ಹಿರಿಯ ಅಧಿಕಾರಿಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:50 IST
Last Updated 18 ಡಿಸೆಂಬರ್ 2025, 6:50 IST
ಕುಣಿಗಲ್ ತಾಲ್ಲೂಕು ಮಂಗಳಾ ಜಲಾಶಯದಲ್ಲಿ ಬಿರುಕು ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ
ಕುಣಿಗಲ್ ತಾಲ್ಲೂಕು ಮಂಗಳಾ ಜಲಾಶಯದಲ್ಲಿ ಬಿರುಕು ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ   

ಕುಣಿಗಲ್: ತಾಲ್ಲೂಕಿನ ಮಂಗಳಾ ಜಲಾಶಯದ ಏರಿಯ ತೂಬಿನ ಬಳಿ ಮಂಗಳವಾರ ರಾತ್ರಿ ಉಂಟಾದ ಬಿರುಕಿನಿಂದ ಅಪಾರ ಪ್ರಮಾಣದ ನೀರು ಪೋಲಾಗಿದೆ. ಹೇಮಾವತಿ ನಾಲಾವಲಯದ ಅಧಿಕಾರಿಗಳು ಹರಸಾಹಸ ಪಟ್ಟು ಬುಧವಾರ ಮಧ್ಯಾಹ್ನ ಬಿರುಕನ್ನು ಮುಚ್ಚಿದರು.

ಮಂಗಳವಾರ ಸಂಜೆಯೇ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ನೀರು ಹರಿಯುತ್ತಿದ್ದನ್ನು ಕಂಡ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ನಿರ್ಲಕ್ಷ್ಯ ತೋರಿದ ಪರಿಣಾಮ ಮಧ್ಯರಾತ್ರಿ ಬಿರುಕು ದೊಡ್ಡ ಪ್ರಮಾಣಕ್ಕೇರಿ ಅಪಾರ ಪ್ರಮಾಣದ ನೀರು ಹರಿದು ತೂಬಿನ ಕೆಳ ಭಾಗದ ಕಲ್ಲುಗಳು ನೀರಿನಲ್ಲಿ ಕೊಚ್ಚಿಹೋಗಿ ಸಮೀಪದ ಹೊಲಗದ್ದೆಗಳಿಗೆ ನೀರು ಹರಿದಿದೆ.

ನೀರನ್ನು ನಿಯಂತ್ರಿಸಿ, ಜಲಾಶಯದ ಏರಿ ಸಂರಕ್ಷಣೆ ಕಾರ್ಯ ಅಧಿಕಾರಿಗಳಿಗೆ ಸವಾಲಾಗಿದ್ದು, ಮಧ್ಯರಾತ್ರಿಯಿಂದಲೇ ಎಇಇ ರುದ್ರೇಶ ತಂಡ ಗ್ರಾಮಸ್ಥರ ಸಹಕಾರದೊಂದಿಗೆ ಶ್ರಮಿಸಿದ್ದರೂ ಪ್ರಯೋಜನವಾಗಲಿಲ್ಲ. ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರನ್ನು ಕ್ರಸ್ಟ್ ಗೇಟ್ ಮೂಲಕ
ಹೊರಬಿಡಲಾಯಿತು.

ADVERTISEMENT

ಬಿರುಕನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಲಾಗಿದ್ದರೂ ಬುಧವಾರ ಬೆಳಗ್ಗೆ ಮತ್ತೆ ಏರಿ ಕುಸಿದ ಪರಿಣಾಮ ಎರಡನೇ ಬಾರಿ ಕ್ರಸ್ಟ್ ಗೇಟ್ ಮೂಲಕ ನೀರನ್ನು ಹರಿಸಿ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಮರಳು, ಜಲ್ಲಿ ಕಲ್ಲುಗಳನ್ನು ತುಂಬುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ನಾಗರಾಜಯ್ಯ, ಅಧಿಕಾರಿಗಳ ಶ್ರಮದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಜಲಾಶಯದ ಅಭಿವೃದ್ಧಿಗೆ ಗಮನಹರಿಸಿಲ್ಲ. ಏರಿ ಭದ್ರತೆಗೆ ಮತ್ತು ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳದ ಕಾರಣ ಸಮಸ್ಯೆಯಾಗಿದೆ. ಹೇಮಾವತಿ ನಾಲಾ ವಲಯದ ಅಭಿವೃದ್ಧಿಗೆ ಸಾಕಷ್ಟೂ ಅನುದಾನ ಬಿಡುಗಡೆಯಾಗಿದೆ. ಆದರೆ ಬಿಡುಗಡೆಯಾದ ಅನುದಾನ ಹೇಮಾವತಿ ವ್ಯಾಪ್ತಿಗೆ ಸೇರದ ಪ್ರದೇಶಗಳ ಅಭಿವೃದ್ಧಿಗೆ ಶಾಸಕರು ಬಳಸಿಕೊಂಡಿದ್ದಾರೆ. ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕಾರ್ಯನಿರ್ವಹಿಸಿದ್ದ ಪರಿಣಾಮ ಮಂಗಳಾ ಜಲಾಶಯಕ್ಕೆ ದುಃಸ್ಥಿತಿ ಬಂದಿದೆ. ಹೇಮಾವತಿ ನಾಲಾವಲಯದ ಅನುದಾನವನ್ನು ನಾಲಾ ವಲಯದ ತೂಬು, ಕಾಲುವೆ, ಏರಿ, ರಸ್ತೆ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದರು. 

ತುಮುಲ್ ನಿರ್ದೇಶಕ ಡಿ.ಕೃಷ್ಣಕುಮಾರ್, ಸಣ್ಣ ಪ್ರಮಾಣದ ಬಿರುಕನ್ನು ಅಧಿಕಾರಿಗಳು ನಿರ್ಲಕ್ಷಿಸಿದ ಪರಿಣಾಮ ಅನಾಹುತ ಸಂಭವಿಸಿದೆ. ಇಲಾಖೆಯಿಂದ ಜಲಾಶಯ ನಿರ್ವಹಣ ವೆಚ್ಚ ಲಕ್ಷಾಂತರ ರೂಪಾಯಿ ಬಿಡುಗಡೆಯಾಗಿ ವೆಚ್ಚವಾಗುತ್ತಿದ್ದರೂ ನಿರ್ವಹಣೆಯಾಗದಿರುವುದು ಖಂಡನೀಯ. ಜಲಾಶಯ ಸಂರಕ್ಷಣೆಗೆ ಶಾಶ್ವತ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.

ಎಇಇ ರುದ್ರೇಶ್, ಮಂಗಳ ಜಲಾಶಯ ವ್ಯಾಪ್ತಿಯಲ್ಲಿ 4 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವಿದೆ. ರೈತರ ಬೆಳೆಗೆ ನೀರು ಬಿಡಲಾಗಿದೆ. ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರು ತೂಬಿನಲ್ಲಿ ಬಿರುಕು ಉಂಟಾಗಿ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದ್ದು, ರೈತರು ಬೆಳಗಿನ ಜಾವ ಒಂದು ಗಂಟೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ನೀರನ್ನು ನಿಯಂತ್ರಿಸಲು ಶ್ರಮಿಸಲಾಗಿದೆ
ಎಂದರು.

ಶಾಸಕ ಡಾ.ರಂಗನಾಥ್ ಭೇಟಿ: ಜಲಾಶಯದಲ್ಲಿ ಬಿರುಕು ಉಂಟಾಗಿ ನೀರು ಪೋಲಾದ ವಿಷಯ ತಿಳಿದ ಶಾಸಕ ಡಾ.ರಂಗನಾಥ್ ಬೆಳಗಾವಿ ಅಧಿವೇಶನ ಮೊಟಕುಗೊಳಿಸಿ ಬುದವಾರ ಸಂಜೆ ಜಲಾಶಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಕಳೆದ ನಾಲ್ಕು ವರ್ಷಗಳಿಂದ ಜಲಾಶಯ ತುಂಬುತ್ತಿದೆ. ನಿರ್ವಹಣೆ ಬಗ್ಗೆ ಗಮನ ಹರಿಸುತ್ತಿದ್ದರೂ ಅನಾಹುತ ಸಂಭವಿಸಿದೆ. ಅಧಿಕಾರಿಗಳ ತಂಡ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರನ್ನು ಸಂಪರ್ಕಿಸಿ ಜಲಾಶಯದ ಸುಸ್ಥಿತಿಗೆ ಕ್ರಮಕೈಗೊಳ್ಳಲು ಮನವಿ ಮಾಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಡಿವೈಎಸ್ಪಿ ಓಂ ಪ್ರಕಾಶ್, ತಹಶೀಲ್ದಾರ್ ರಶ್ಮೀ ಮತ್ತು ಹೇಮಾವತಿ ನಾಲಾವಲಯದ ಅಧಿಕಾರಿಗಳು ಭೇಟಿ ನೀಡಿದ್ದರು.

ಕುಣಿಗಲ್ ತಾಲ್ಲೂಕು ಮಂಗಳಾ ಜಲಾಶಯ ಏರಿಯಲ್ಲಿ ಬಿರುಕು ಬಿಟ್ಟಿದ್ದ ಸ್ಥಳಕ್ಕೆ ಮಾಜಿ ಸಚಿವ ಡಿ.ನಾಗರಾಜಯ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ತುಮುಲ್ ನಿರ್ದೇಶಕ ಡಿ.ಕೃಷ್ಣಕುಮಾರ್ ಭೇಟಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.