ADVERTISEMENT

ಕೊರಟಗೆರೆ | ಕಳೆಗಟ್ಟಿದ ಕ್ಯಾಮೇನಹಳ್ಳಿ ದನಗಳ ಜಾತ್ರೆ

ಎ.ಆರ್.ಚಿದಂಬರ
Published 18 ಜನವರಿ 2026, 6:04 IST
Last Updated 18 ಜನವರಿ 2026, 6:04 IST
ಕ್ಯಾಮೇನಹಳ್ಳಿ ಜಾತ್ರೆಯಲ್ಲಿ ರಾಸುಗಳು
ಕ್ಯಾಮೇನಹಳ್ಳಿ ಜಾತ್ರೆಯಲ್ಲಿ ರಾಸುಗಳು   

ಕೊರಟಗೆರೆ: ತಾಲ್ಲೂಕಿನ ಕ್ಯಾಮೇನಹಳ್ಳಿ ದನಗಳ ಜಾತ್ರೆ ಎಂದರೆ ಈ ಭಾಗದ ರೈತರಿಗೆ ಇನ್ನಿಲ್ಲದ ಸಡಗರ, ಸಂಭ್ರಮ. ಸಂಕ್ರಾಂತಿ ಆಸುಪಾಸಿನಲ್ಲಿ ನಡೆಯುವ ಈ ಜಾತ್ರೆ ಕೇವಲ ವ್ಯಾಪಾರ ಕೇಂದ್ರವಷ್ಟೇ ಅಲ್ಲ, ವರ್ಷಕ್ಕೊಮ್ಮೆ ರೈತರು, ವ್ಯಾಪಾರಿಗಳು, ಜಾನುವಾರು ಪ್ರೇಮಿಗಳನ್ನು ಒಗ್ಗೂಡಿಸುವ ವೇದಿಕೆ.

ಒಂದು ವಾರ ನಡೆಯುವ ಕ್ಯಾಮೇನಹಳ್ಳಿ ದನಗಳ ಜಾತ್ರೆಗೆ ತಾಲ್ಲೂಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ರಾಸುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಜಾತ್ರೆಯಲ್ಲಿ ₹2.5 ಲಕ್ಷ ಮೌಲ್ಯದ ಜೋಡಿ ಎತ್ತುಗಳು ಮಾರಾಟಕ್ಕೆ ಇವೆ. ವಿಶೇಷವಾಗಿ ಈ ಭಾಗದ ‘ಹಳ್ಳಿಕಾರ್’ ತಳಿಯ ಹೋರಿಗಳಿಗೆ ಬೇಡಿಕೆ ಇರುವ ಕಾರಣದಿಂದಲೇ ರಾಜ್ಯದ ನಾನಾ ಜಿಲ್ಲೆಗಳಿಂದ ರೈತರು ಪ್ರತಿವರ್ಷ ಜಾತ್ರೆಗೆ ಬರುತ್ತಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದನಗಳ ವ್ಯಾಪಾರ ಮಂಕಾಗಿದೆ ಎಂದು ಸ್ಥಳೀಯ ರೈತರು ಅಭಿಪ್ರಾಯಪಟ್ಟಿದ್ದಾರೆ. ಜಾತ್ರೆಯಲ್ಲಿ ದನಗಳ ಬೆಲೆ ದುಬಾರಿಯಾಗಿವೆ ಎಂಬುದು ಹೊರ ಜಿಲ್ಲೆಗಳಿಂದ ಬಂದಿರುವ ರೈತರ ಮಾತು. ಈ ಕಾರಣದಿಂದಾಗಿ ಖರೀದಿದಾರರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿಲ್ಲ.

ADVERTISEMENT

ಕಳೆದ ವರ್ಷ ಜಾತ್ರೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದನ ಖರೀದಿಗೆ ಮುಂದಾಗಿದ್ದರು. ಆದರೆ ಈ ಬಾರಿ ಯುವಜನರಲ್ಲಿ ಅಷ್ಟಾಗಿ ಉತ್ಸಾಹ ಕಾಣಿಸಿಲ್ಲ. ಈ ಬಾರಿ ಜಾತ್ರೆಗೆ ಕಡಿಮೆ ಸಂಖ್ಯೆಯ ದನಗಳು ಬಂದಿರುವುದರಿಂದ ಹೊರ ಜಿಲ್ಲೆಗಳಿಂದ ಖರೀದಿಸಲು ಬರುವ ರೈತರ ಸಂಖ್ಯೆಯಲ್ಲೂ ಕೊಂಚ ಇಳಿಮುಖವಾಗಿದೆ.

ಈ ಭಾಗದ ಹಳ್ಳಿಕಾರ್ ತಳಿಯ ದನಗಳಿಗೆ ಹೆಚ್ಚಿನ ಮಹತ್ವ ಇದೆ. ಜೊತೆಗೆ ಅಮೃತಮಹಲ್ ಜಾತಿಯ ದನಗಳು ಕೂಡ ಇಲ್ಲಿ ಕಾಣಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹಾಲು ಉತ್ಪಾದನೆಗೆ ಆದ್ಯತೆ ನೀಡುತ್ತಿರುವ ಹಿನ್ನಲೆಯಲ್ಲಿ ಎಚ್‌ಎಫ್ ತಳಿಯ ರಾಸುಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶಿ ತಳಿಗಳಾದ ಹಳ್ಳಿಕಾರ್ ಹಾಗೂ ಅಮೃತಮಹಲ್ ದನಗಳನ್ನು ಸಾಕುವವರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಿದೆ.

ಹಿಂದೆ ಪ್ರತಿ ಮನೆಯ ಅಂಗಳದಲ್ಲಿ ಹಳ್ಳಿಕಾರ್ ತಳಿ ರಾಸುಗಳು ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಈಗ ಆ ಜಾಗದಲ್ಲಿ ಎಚ್‌ಎಫ್ ತಳಿ ರಾಸುಗಳು ಕಾಣಸಿಗುತ್ತಿವೆ. ಇದರಿಂದಾಗಿ ಜಾತ್ರೆಗೆ ಬರುವ ದೇಶಿ ತಳಿಯ ರಾಸುಗಳ ಸಂಖ್ಯೆ ಇಳಿಮುಖವಾಗಿದೆ.

ಕ್ಯಾಮೇನಹಳ್ಳಿ ದನಗಳ ಜಾತ್ರೆ ಅಂಗವಾಗಿ ಜನವರಿ 25ರಂದು ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರೆಯಲ್ಲಿ ₹1.5 ಲಕ್ಷಕ್ಕೂ ಅಧಿಕ ಬೆಲೆಯ ರಾಸುಗಳು
ದೊಡ್ಡಯ್ಯ
ರಂಜಿತ್
ಇಬ್ರಾಹಿಂ
ಕಂಡೋಜಿ ಮಾರಪ್
ದೊಡ್ಡ ಮಟ್ಟದ ಎತ್ತುಗಳ ವ್ಯಾಪಾರ ಮಂಕಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ವ್ಯಾಪಾರ ಇಳಿಮುಖವಾಗಿದೆ.
ದೊಡ್ಡಯ್ಯ ಹೊನ್ನುಡಿಕೆ
ಹಳ್ಳಿಕಾರ್ ತಳಿ ಪೋಷಿಸುವ ಉದ್ದೇಶದಿಂದ ₹32 ಸಾವಿರ ಕೊಟ್ಟು ಎಂಟು ತಿಂಗಳ ಹೆಣ್ಣು ಕರು ಖರೀದಿಸಿದ್ದೇನೆ. ಹೊಸದಾಗಿ ದನ ಕರು ಸಾಕುವುದಕ್ಕೆ ಪ್ರಾರಂಭಿಸಿದ್ದೇನೆ.
ರಂಜಿತ್ ದೊಡ್ಡಬಳ್ಳಾಪುರ
ಇಲ್ಲಿನ ಹಳ್ಳಿಕಾರ್ ಎತ್ತುಗಳಿಗೆ ಬಹಳ ಬೇಡಿಕೆ ಇದೆ. ಮಾರಾಟದ ಉದ್ದೇಶದಿಂದ 40 ವರ್ಷದಿಂದ ಈ ಜಾತ್ರೆಗೆ ಬಂದು 10ರಿಂದ 12 ಜೊತೆ ಎತ್ತು ಖರೀದಿ ಮಾಡಿ ಕೊಂಡೊಯ್ಯುತ್ತೇನೆ.
ಇಬ್ರಾಹಿಂ ದಳ್ಳಾಳಿ ಹಾವೇರಿ
ಜಾತ್ರೆಗೆ ದನ ಕಡಿಮೆ ಬಂದಿವೆ. ಸಣ್ಣ ದನ ಮಾತ್ರ ಇವೆ. ಬೆಲೆ ಹೆಚ್ಚಿದೆ. ಆದರೂ 20 ಜೊತೆ ಎತ್ತು ಕೊಂಡೊಯ್ಯಲು 15 ಜನ ರೈತರು ಜಾತ್ರೆಗೆ ಬಂದಿದ್ದೇವೆ.
ಕಂಡೋಜಿ ಮಾರಪ್ಪ ಕುರುಗೂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.