ADVERTISEMENT

ಲಾಕ್‌ಡೌನ್ ಉಲ್ಲಂಘನೆ: ಗ್ರಾಮಸ್ಥರ ಜೊತೆ ಹುಟ್ಟುಹಬ್ಬ ಆಚರಿಸಿದ ಬಿಜೆಪಿ ಶಾಸಕ

ಶಾಸಕ ಮಸಾಲ ಜಯರಾಮ್, ಪೊಲೀಸರ ಸಮ್ಮುಖದಲ್ಲಿಯೇ ಸಾಮಾಜಿಕ ಅಂತರ ಪಾಲನೆಯೇ ಇಲ್ಲ, ಬಿರಿಯಾನಿ ಊಟ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 5:55 IST
Last Updated 11 ಏಪ್ರಿಲ್ 2020, 5:55 IST
ಇಡಗೂರಿನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಶಾಸಕ ಮಸಾಲ ಜಯರಾಮ್
ಇಡಗೂರಿನಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಶಾಸಕ ಮಸಾಲ ಜಯರಾಮ್   

ಗುಬ್ಬಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆಗಳು ಇದ್ದರೂ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಈ ನಿಯಮಗಳನ್ನು ಉಲ್ಲಂಘಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸಾಮೂಹಿಕವಾಗಿ ಬಿರಿಯಾನಿ ಊಟ ಸಹ ಹಾಕಿಸಿದ್ದಾರೆ.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಇಡಗೂರು ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಈ ಜನ್ಮದಿನ ಆಚರಣೆ ನಡೆದಿದೆ. ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಶಾಸಕರೇ ಬಿರಿಯಾನಿ ಬಡಿಸಿದ್ದಾರೆ. ಇಷ್ಟೆಲ್ಲಾ ಆಚರಣೆಗಳು ನಡೆಯುತ್ತಿರುವಾಗ ಸ್ಥಳದಲ್ಲಿ ಪೊಲೀಸರು ಸಹ ಇದ್ದರು.

ADVERTISEMENT

ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಿದರೆ ಮನಬಂದಂತೆ ಪೊಲೀಸರು ಥಳಿಸುತ್ತಾರೆ. ಆದರೆ ಸ್ಥಳದಲ್ಲಿ ಇದ್ದರೂ ಆಚರಣೆ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.

‘ಈ ಬಗ್ಗೆ ಉತ್ತರಿಸುವಂತೆ ಸರ್ಕಲ್ ಇನ್‌ಸ್ಪೆಕ್ಟರ್‌ ರಾಮಕೃಷ್ಣಯ್ಯ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಬ್‌ಇನ್‌ಸ್ಪೆಕ್ಟರ್ ನಾಗರಾಜು ನಮಗೆ ಈ ಕಾರ್ಯಕ್ರಮ ವಿಚಾರವನ್ನು ಗಮನಕ್ಕೆ ತಂದಿರಲಿಲ್ಲ. ಈ ಬಗ್ಗೆ ಪಿಎಸ್‌ಐ ಅವರಿಂದ ಕಾರಣ ಕೇಳಿದ್ದೇನೆ’ ಎಂದು ರಾಮಕೃಷ್ಣಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.