ತುಮಕೂರು: ಜಿಲ್ಲೆಯ ಪ್ರೇಮಿಗಳಿಬ್ಬರು ಉಡುಪಿ ಜಿಲ್ಲೆಯ ಹೊನ್ನಾವರ ಬಳಿಯ ಶರಾವತಿ ನದಿಗೆ ಹಾರಿ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶನಿವಾರ ಮೃತದೇಹಗಳು ಪತ್ತೆಯಾಗಿವೆ.
ನಗರದ ಶೆಟ್ಟಿಹಳ್ಳಿ ಗೇಟ್ ನಿವಾಸಿ ಅಮೂಲ್ಯ (17), ಶಿರಾ ತಾಲ್ಲೂಕಿನ ನೆಲಹಾಳ್ ಗ್ರಾಮದ ದಿಲೀಪ್ (17) ಮೃತರು. ಏ. 10ರಂದು ಅಮೂಲ್ಯ ಪೋಷಕರು ತಮ್ಮ ಮಗಳು ಕಾಣೆಯಾದ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಕಾಲೇಜಿಗೆ ಹೋಗಿದ್ದ ಅಮೂಲ್ಯ ಹಿಂದಿರುಗಿ ಬಂದಿಲ್ಲ, ದಿಲೀಪ್ ಜತೆ ಹೋಗಿರುವ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ನಗರದ ವಿದ್ಯಾವಾಹಿನಿ ಕಾಲೇಜಿನಲ್ಲಿ ಇಬ್ಬರು ಓದುತ್ತಿದ್ದರು. ಅಮೂಲ್ಯ ಲಿಂಗಾಯತ ಜಾತಿಗೆ ಹಾಗೂ ದಿಲೀಪ್ ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದು, ಇಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು, ಹೊನ್ನಾವರಕ್ಕೆ ತೆರಳಿದ್ದರು. ಇಬ್ಬರು ನದಿಗೆ ಹಾರಿದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶುಕ್ರವಾರ ರಾತ್ರಿ ಅಮೂಲ್ಯ ಮೃತದೇಹ ಹೊರ ತೆಗೆದರು. ಶನಿವಾರ ಬೆಳಿಗ್ಗೆ ದಿಲೀಪ್ ಮೃತದೇಹ ಸಿಕ್ಕಿದೆ. ಇಬ್ಬರ ಆಧಾರ್ ಕಾರ್ಡ್‌ಗಳು ಸ್ಥಳದಲ್ಲಿ ದೊರೆತಿದ್ದರಿಂದ ವಿಳಾಸ ಪತ್ತೆ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.