
ಮಧುಗಿರಿ: ಗೌರಿಬಿದನೂರು-ಶಿರಾ ರಸ್ತೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುತ್ತಿರುವಂತೆ ಮಧುಗಿರಿ-ತುಮಕೂರು ರಸ್ತೆಗೂ ಕೂಡ ಶೀಘ್ರ ಅನುದಾನ ತಂದು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕಿದೆ.
ತುಮಕೂರು-ಮಧುಗಿರಿ ರಸ್ತೆ ಹಲವು ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ. ಇಂದು ಸದಾ ವಾಹನಗಳ ಜತೆಗೆ ಜನದಟ್ಟಣೆಯಿಂದ ಕೂಡಿರುವ ಕಾರಣ ಜನರಿಗೆ ಕಿರಿಕಿರಿಯುಂಟಾಗುವಂತೆ ಮಾಡಿದೆ. ಸದಾ ವಾಹನಗಳಿಂದ ತುಂಬಿರುವುದರ ಜತೆಗೆ ಕಿರಿದಾದ ರಸ್ತೆಯಲ್ಲಿ ಇಂದು ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಜತೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಮತ್ತು ಕೆಲಸ ಕಾರ್ಯಗಳಿಗೆ ಹೋಗಿ ಬರುತ್ತಿದ್ದಾರೆ. ಇದರಿಂದ ಹಲವು ಕಡೆ ಅಪಘಾತಗಳು ಸಂಭವಿಸಿ ಪ್ರಾಣ-ಹಾನಿ ಕೂಡ ಸಂಭವಿಸುತ್ತಿದೆ.
ತುಮಕೂರು, ಮಧುಗಿರಿ, ಮಡಕಶಿರಾ, ಪಾವಗಡದಿಂದ ಚಳ್ಳಕೆರೆ, ಬಳ್ಳಾರಿ ಹಾಗೂ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಕ್ಕೆ ಮತ್ತು ತುಮಕೂರು, ಹಾಸನ, ಮಂಗಳೂರು, ಉತ್ತರ ಕರ್ನಾಟಕದ ಹಲವು ಪ್ರವಾಸಿ ಸ್ಥಳ, ಮಂಡ್ಯ, ಮೈಸೂರು ಹಾಗೂ ಪ್ರಮುಖವಾಗಿ ಬೆಂಗಳೂರು ನಗರಕ್ಕೆ ಈ ರಸ್ತೆ ಮಾರ್ಗವಾಗಿ ಹೆಚ್ಚಾಗಿ ವಾಹನಗಳು ತೆರಳುವುದರಿಂದ ಈಗಿನ ಕಿರಿದಾದ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಿದರೆ ಶೀಘ್ರ ತಲುಪಲು ಸಾಧ್ಯ. ಈ ಭಾಗ ಅಭಿವೃದ್ಧಿ ಜತೆಗೆ ಈ ರಸ್ತೆಯಲ್ಲಿ ಅಪಘಾತಗಳಿಂದ ಉಂಟಾಗುವ ಪ್ರಾಣಹಾನಿ ಕೂಡ ತಪ್ಪಿಸಬಹುದಾಗಿದೆ.
ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವ ಉದ್ದೇಶದಿಂದ ಈಗಾಗಲೇ ಶಾಸಕ ಹಾಗೂ ಅಧಿಕಾರಿಗಳು ಪಟ್ಟಣದಲ್ಲಿ ಕೆಲಸ ಕೈಗೊಂಡಿದ್ದಾರೆ. ಪಟ್ಟಣದಲ್ಲಿ ₹25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಚತುಷ್ಪಥ ರಸ್ತೆಗೆ ವಿದ್ಯುತ್ ದೀಪ ಅಳವಡಿಕೆ, ಎಆರ್‌ಟಿಒ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಕಾಮಗಾರಿ ಆರಂಭ, ಏಪ್ರಿಲ್ 15ರ ನಂತರ ರೈಲ್ವೆ ಕಾಮಗಾರಿ ಆರಂಭದ ಜೊತೆಗೆ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಸಿದ್ಧತೆ ನಡೆದಿದೆ.
ನಿರ್ಮಾಣದ ನಂತರ ಈ ಭಾಗದಲ್ಲಿನ ಏಕಶಿಲಾ ಬೆಟ್ಟ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ತಿಮ್ಮಲಾಪುರ ಕರಡಿಧಾಮ, ದಂಡಿನ ಮಾರಮ್ಮ, ವೆಂಕಟರವಣ, ಮಲ್ಲೇಶ್ವರ ದೇವಸ್ಥಾನಗಳ ಜತೆಗೆ ಇತರೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವುದರಿಂದ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅಭಿವೃದ್ಧಿ ಹಾಗೂ ಪ್ರಯಾಣಿಕರ ದೃಷ್ಟಿಯಿಂದ ರಸ್ತೆ ಅಭಿವೃದ್ಧಿಪಡಿಸಬೇಕು ಎನ್ನುತ್ತಾರೆ ಮಧುಗಿರಿಯ ಜನರು.
ಮಧುಗಿರಿ ಪಟ್ಟಣ ಆಂಧ್ರದ ಹಿಂದೂಪುರ ಪಾವಗಡ ಶಿರಾ ಗೌರಿಬಿದನೂರು ತುಮಕೂರು ರಸ್ತೆಗೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ತುಮಕೂರು-ಮಧುಗಿರಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಶಾಸಕ ಮನಸು ಮಾಡಬೇಕು.ಸಿದ್ದಾಪುರ ರಂಗಸ್ವಾಮಿ
ಆರ್ಥಿಕ-ಸಾಮಾಜಿಕ ಬೆಳವಣಿಗೆ
ಚತುಷ್ಪಥ ರಸ್ತೆಯಿಂದಾಗಿ ವಿದ್ಯಾಭ್ಯಾಸ ವ್ಯಾಪಾರ ವಾಣಿಜ್ಯ ಅಭಿವೃದ್ಧಿ ಉದ್ಯೋಗಾವಕಾಶ ಪ್ರವಾಸೋದ್ಯಮ ಕೈಗಾರಿಕೆ ಹಾಗೂ ಹೂಡಿಕೆ ಆಕರ್ಷಣೆ ಮತ್ತು ಪ್ರಾದೇಶಿಕ ಅಭಿವೃದ್ಧಿ ಮೂಲಕ ಆರ್ಥಿಕ-ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಬಿ.ಮಂಜುನಾಥ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಪ್ರವಾಸಿಗರ ಸಂಖ್ಯೆ ಹೆಚ್ಚಳ ವಾಹನ ಸಂಚಾರ ಹೆಚ್ಚಿರುವುದರ ಜತೆಗೆ ಹಲವು ರಸ್ತೆಗಳಿಗೆ ಕೇಂದ್ರಬಿಂದುವಾಗಿರುವ ರಸ್ತೆ ಅಭಿವೃದ್ಧಿಯಾದರೆ ಮುಂದಿನ ದಿನಗಳಲ್ಲಿ ಮಧುಗಿರಿ ಜಿಲ್ಲಾ ಕೇಂದ್ರವಾಗಿ ಪರಿವರ್ತನೆಯಾಗುತ್ತದೆ. ರೋಪ್ ವೇನಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವುದರಿಂದ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಒತ್ತಾಯಿಸಲಾಗುವುದು. ಹನುಮಂತರೆಡ್ಡಿ ಬಿಜೆಪಿ ಮಂಡಲ ಅಧ್ಯಕ್ಷ ಬಹುತೇಕರಿಗೆ ಅನುಕೂಲ ಮಧುಗಿರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತು ಎಸ್.ಪಿ ಕಚೇರಿ ಹೊರತುಪಡಿಸಿ ಇತರೆ ಎಲ್ಲ ಕಚೇರಿಗಳು ಕಾರ್ಯನಿರ್ವಹಿಸುತ್ತಿರುವುದು ಅಭಿವೃದ್ಧಿಯ ಸಂಕೇತ. ಭವಿಷ್ಯದ ದೃಷ್ಟಿಯಿಂದ ಈ ರಸ್ತೆ ಚತಷ್ಪಥ ರಸ್ತೆಯಾಗಿ ಮಾರ್ಪಾಡಾದರೆ ಬಹುತೇಕರಿಗೆ ಅನುಕೂಲವಾಗಲಿದೆ. ಶಂಕರನಾರಾಯಣ ಕಸಾಪ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.