ADVERTISEMENT

ತುಮಕೂರು: 6 ತಿಂಗಳಲ್ಲಿ 442 ಜನರಿಗೆ ಹಠಾತ್ ಹೃದಯಾಘಾತ, 11 ಸಾವು

21,700 ಜನರಿಗೆ ಇಸಿಜಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:18 IST
Last Updated 2 ಜುಲೈ 2025, 6:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ತುಮಕೂರು: ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 442 ಜನರಿಗೆ ಹಠಾತ್ ಹೃದಯಾಘಾತವಾಗಿದ್ದು, ಇದರಲ್ಲಿ 11 ಜನ ಮೃತಪಟ್ಟಿದ್ದಾರೆ.

ನಗರದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ಚಂದ್ರಶೇಖರ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ADVERTISEMENT

‘ಜನವರಿಯಿಂದ ಜೂನ್ 30ರ ವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ. 21,700 ಜನರಿಗೆ ಇಸಿಜಿ ಮಾಡಲಾಗಿದೆ. ಅದರಲ್ಲಿ 11,335 ವರದಿ ಅಸಹಜ ಎಂದು ಬಂದಿದೆ. ಇಸಿಜಿ ಮಾಡಿಸಿದವರ ಪೈಕಿ 1,533 ಜನ ಕ್ರಿಟಿಕಲ್ ಹಂತದಲ್ಲಿ‌ ಇದ್ದಾರೆ. 442 ಜನರಿಗೆ ಟೆನೆಕ್ಟೋ‌ಪ್ಲಸ್ ಇಂಜೆಕ್ಷನ್‌ ನೀಡಲಾಗಿದೆ’ ಎಂದರು.

ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಸೌಲಭ್ಯವಿದೆ. ತುಮಕೂರು‌, ಶಿರಾ, ಮಧುಗಿರಿ, ಕೊರಟಗೆರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.

ನಟ ಪುನೀತ್‌ ರಾಜ್‌ಕುಮಾರ್‌ ನಿಧನದ ನಂತರ ಸ್ಟೆಮಿ ಯೋಜನೆ ಜಾರಿಗೆ ತರಲಾಯಿತು. ಜಿಲ್ಲೆಯ ಉಳಿದ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಈ ಯೋಜನೆ ನೆರವು ಸಿಗುವಂತೆ ಮಾಡಬೇಕು ಎಂಬ ಬೇಡಿಕೆ ಇದೆ. ಇದು ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕು. ಮುಂದಿನ ದಿನಗಳಲ್ಲಿ ಎಲ್ಲ ಕಡೆ ವಿಸ್ತರಿಸಬಹುದು ಎಂದು ಮಾಹಿತಿ ನೀಡಿದರು.

ಹೃದಯಾಘಾತ: ಗ್ರಾ.ಪಂ ಸದಸ್ಯ ಸಾವು

ತುಮಕೂರು: ತಾಲ್ಲೂಕಿನ ಊರುಕೆರೆ ಗ್ರಾಮ ಪಂಚಾಯಿತಿ ಸದಸ್ಯ ನೀಲಕಂಠಸ್ವಾಮಿ (36) ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನೀಲಕಂಠಸ್ವಾಮಿ ಹೆಬ್ಬಾಕ ನಿವಾಸಿ. ಮಗಳನ್ನು ಶಾಲೆಗೆ ಬಿಟ್ಟು ವಾಪಸ್‌ ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ಅಸ್ವಸ್ಥರಾಗಿದ್ದರು.

ಕೂಡಲೇ ಅವರನ್ನು ನಗರದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ತಂದೆ ತಾಯಿ ಪತ್ನಿ ಪುತ್ರಿ ಇದ್ದಾರೆ. ಹೆಬ್ಬಾಕದ ಮೃತರ ತೋಟದಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.