
ಹುಳಿಯಾರು: ಹೋಬಳಿಯ ಮೇಲನಹಳ್ಳಿ ಬಳಿ ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಶನಿವಾರ ಸ್ಥಳ ಪರಿಶೀಲನೆಗೆ ಬಂದಿದ್ದ ತಹಶೀಲ್ದಾರ್ ಎಂ.ಮಮತಾ ಅವರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.
ಹುಳಿಯಾರು ಪಟ್ಟಣದ ಕಸದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ ಐದಾರು ಕಡೆ ಘಟಕ ಸ್ಥಾಪಿಸಲು ಅಧಿಕಾರಿಗಳು ಸ್ಥಳ ಗುರ್ತಿಸಿ ಹೈರಾಣಾಗಿದ್ದಾರೆ. ಎಲ್ಲ ಕಡೆಯೂ ಆಯಾಯ ಗ್ರಾಮಸ್ಥರ ವಿರೋಧದಿಂದಾಗಿ ಘಟಕ ಸ್ಥಾಪನೆ ಆಗುತ್ತಿಲ್ಲ. ಈ ನಡುವೆ ಹೋಬಳಿಯ ಗಡಿ ಭಾಗವಾದ ಮೇಲನಹಳ್ಳಿ ಸರ್ಕಾರಿ ಜಾಗದಲ್ಲಿ ಕಂದಾಯ ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ. ಗೋಮಾಳ ಜಾಗವಾಗಿದ್ದು ರೈತರು ಉಳಿಮೆ ಮಾಡದ ಕಾರಣ ರೈತರು ಹಾಕಿದ್ದ ಅರ್ಜಿಯನ್ನು ಉಪವಿಭಾಗಾಧಿಕಾರಿ ವಜಾ ಗೊಳಿಸಿದ್ದರು. ಸ್ಥಳ ಗುರುತಿಸಿ ಕಂದಾಯ ಅಧಿಕಾರಿಗಳು ಹುಳಿಯಾರು ಪಟ್ಟಣ ಪಂಚಾಯಿತಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಖಾತೆ ಬದಲಾಯಿಸಿದ್ದಾರೆ. ಆದರೆ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು.
ನೂತನವಾಗಿ ಅಧಿಕಾರ ವಹಿಸಿಕಂಡಿರುವ ತಹಶೀಲ್ದಾರ್ ಎಂ.ಮಮತಾ ಕಂದಾಯ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ಶನಿವಾರ ತೆರಳಿದ್ದರು. ಈ ವೇಳೆ ನೂರಾರು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಘಟಕ ಸ್ಥಾಪನೆ ಸ್ಥಳಕ್ಕೆ ತಹಶೀಲ್ದಾರ್ ಹೋಗದಂತೆ ಗ್ರಾಮದಲ್ಲಿಯೇ ನಿಲ್ಲಿಸಿ ಅದರಿಂದ ಆಗುವ ತೊಂದರೆಗಳ ಬಗ್ಗೆ ಗಮನ ಸೆಳೆದರು.
ಘಟಕ ಸ್ಥಾಪನೆಯಿಂದ ಜನ-ಜಾನುವಾರುಗಳಿಗೆ ತೊಂದರೆ ಆಗುತ್ತದೆ. ಅರಣ್ಯಕ್ಕೆ ಹೊಂದಿಕೊಂಡಿದ್ದು ಪ್ರಾಣಿ-ಪಕ್ಷಿಗಳಿಗೂ ತೊಂದರೆ ಆಗುತ್ತದೆ. ಇದೇ ಪ್ರದೇಶದಲ್ಲಿ ಕಣಿವೆ ಭೂತನ ದೇಗುಲವಿದ್ದು ಅನಾದಿ ಕಾಲದಿಂದಲೂ ಕಲ್ಯಾಣಿಯಿದೆ. ಎಂತಹ ಬರಗಾಲ ಬಂದರೂ ಇಲ್ಲಿ ನೀರು ಇರುವುದರಿಂದ ಧಾರ್ಮಿಕ ಕಾರ್ಯಗಳಿಗೆ ನೀರು ಬಳಕೆಯಾಗುತ್ತದೆ. ಘಟಕ ಸ್ಥಾಪನೆ ದಿಬ್ಬದಲ್ಲಿದ್ದು ಮಳೆ ಬಂದಾಗ ಅಲ್ಲಿಂದ ಕಲುಷಿತ ನೀರು ಹರಿದು ಕಲ್ಯಾಣಿ ಸೇರಿ ನೀರು ಮಲಿನಗೊಳ್ಳುತ್ತದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆ ಎಂದು ವಕೀಲ ಬಿ.ಕೆ.ಸದಾಶಿವಪ್ಪ ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿದರು.
25 ಕೀ.ಮೀ.ದೂರದಲ್ಲಿ ಘಟಕ ಸ್ಥಾಪನೆಯಿಂದ ಸಾಗಾಣಿಕೆ ವೆಚ್ಚವೂ ಅಧಿಕವಾಗುತ್ತದೆ. ಯಾವುದೇ ಕಾರಣಕ್ಕೂ ಇಲ್ಲಿ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ ಎಂದು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಒಕ್ಕೂರಲಿನಿಂದ ತಮ್ಮ ನಿಲುವು ಪ್ರಕಟಿಸಿದರು.
ತಹಶಿಲ್ದಾರ್ ಎಂ.ಮಮತಾ ಗ್ರಾಮಸ್ಥರ ಮನವೊಲಿಸಿ ಸ್ಥಳ ಪರಿಶೀಲನೆ ನಡೆಸಿದರು. ಸಿಪಿಐ ಜನಾರ್ಧನ್, ಪ್ರಭಾರ ಪಿಎಸ್‌ಐ ಚಿತ್ತರಂಜನ್, ಕಂದಾಯ ತನಿಖಾಧಿಕಾರಿ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಪಟ್ಟಣ ಪಂಚಾಯಿತಿಗೆ ಭೇಟಿ ತಹಶೀಲ್ದಾರ್ ಎಂ.ಮಮತಾ
ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ಕಸ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ನಿರತರನ್ನು ಭೇಟಿ ಮಾಡಿದರು. ನಿಮ್ಮ ಬೇಡಿಕೆಗಳನ್ನು ಸದ್ಯದಲ್ಲಿಯೇ ಈಡೇರಿಸಲಾಗುವುದು ಧರಣಿ ಕೈಬಿಡಿ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.