ADVERTISEMENT

ಬಿಸಿಯೂಟ ನೌಕರರಿಂದ ಬೆಂಗಳೂರು ಚಲೋ

ಜ.21, 22 ರಂದು ಬೆಂಗಳೂರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:45 IST
Last Updated 16 ಜನವರಿ 2020, 19:45 IST
ಎನ್.ಶಿವಣ್ಣ
ಎನ್.ಶಿವಣ್ಣ   

ತುಮಕೂರು: ಬಿಸಿಯೂಟ ತಯಾರಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನಿಂದ ಜ.21 ಮತ್ತು 22 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ರಾಜ್ಯ ಕಾನೂನು ಸಲಹೆಗಾರ ಎನ್.ಶಿವಣ್ಣ ತಿಳಿಸಿದರು.

ರಾಜ್ಯದ ವಿವಿಧೆಡೆಯಿಂದ ನೌಕರರು ಜ.21 ರಂದು ಬೆಳಿಗ್ಗೆ 7ಕ್ಕೆ ತುಮಕೂರು ರೈಲು ಇಲ್ದಾಣದಲ್ಲಿ ಸೇರಲಿದ್ದಾರೆ. ಅಲ್ಲಿಂದ ರೈಲಿನಲ್ಲಿ ಬೆಂಗಳೂರು ತೆರಳಲಿದ್ದೇವೆ. ಬೆಂಗಳೂರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಸಿಯೂಟ ನೌಕರರು ಕಳೆದ 17 ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕನಿಷ್ಠ ವೇತನ ಮತ್ತು ಇತರೆ ಸೌಲಭ್ಯಗಳಿಂದ ವಂಚಿತರಾಗಿ ದುಡಿಯುತ್ತಿದ್ದಾರೆ. ಕರ್ನಾಟಕದಲ್ಲಿ ಮುಖ್ಯ ಅಡುಗೆಯವರಿಗೆ ₹2700 ಹಾಗೂ ಅಡುಗೆ ಸಹಾಯಕರಿಗೆ ₹2600 ಮಾತ್ರ ನೀಡಲಾಗುತ್ತಿದೆ. ಈ ಅತ್ಯಲ್ವ ಹಣದಿಂದ ಜೀವನ ನಿರ್ವಹಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ADVERTISEMENT

ಸರ್ಕಾರವು ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಹುನ್ನಾರ ನಡೆಸುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದಲ್ಲಿ 1 ಲಕ್ಷ 18 ಸಾವಿರ ಮಹಿಳೆಯರು ಕೆಲಸ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ. ಸರ್ಕಾರಗಳು ಜನರಿಗೆ ಕೆಲಸ ಕೊಡಬೇಕೇ ವಿನಾಃ ಕೆಲಸ ಕಿತ್ತುಕೊಳ್ಳುವುದು ಶೋಭೆಯಲ್ಲ ಎಂದರು.

ಎಐಟಿಯುಸಿ ತುಮಕೂರು ಘಟಕದ ಅಧ್ಯಕ್ಷೆ ರಾಧಮ್ಮ ಮಾತನಾಡಿ, ‘ನಮಗೆ ಕೆಲಸ ಜಾಸ್ತಿ, ಸಂಬಳ ಕಡಿಮೆ. ಅತ್ಯಲ್ಪ ಹಣದಿಂದ ಜೀವನ ನಡೆಸುವುದಾದರೂ ಹೇಗೆ?. ಕೇವಲ ₹2700 ಹಣದಿಂದ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಸಾಧ್ಯವೇ?’ ಎಂದು ಪ್ರಶ್ನಿಸಿದ ಅವರು, ಬಿಸಿಯೂಟ ನೌಕರರ ತಮ್ಮ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಗಿರೀಶ್, ಸತ್ಯನಾರಾಯಣ, ಕೆಂಚೆಗೌಡ, ಕಾಂತರಾಜು, ಶಶಿಕಾಂತ್, ವನಜಾಕ್ಷಮ್ಮ, ಉಮಾದೇವಿ, ಪದ್ಮಾ, ರತ್ನಮ್ಮ, ಲಕ್ಷ್ಮಿದೇವಮ್ಮ, ಉಮಾದೇವಿ, ನಳಿನಿ, ಮಂಜುಳಾ, ರಾಧಾ, ಪ್ರೇಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.