
ಚಿಕ್ಕನಾಯಕನಹಳ್ಳಿ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮತದಾರನೂ ಸಮಾಜದ ಏಳಿಗೆಗಾಗಿ ಮತ ಚಲಾಯಿಸಬೇಕು ಎಂದು ನ್ಯಾಯಾಧೀಶ ಸತೀಶ್ ಎಸ್.ಟಿ ಸಲಹೆ ನೀಡಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ಭಾನುವಾರ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಆಡಳಿತ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ನಡೆದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯಲ್ಲಿ ಮಾತನಾಡಿದರು.
ಅಬ್ರಹಾಂ ಲಿಂಕನ್ ಹೇಳಿದಂತೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಈ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತದಾನವೇ ಪ್ರಮುಖ ಅಸ್ತ್ರ. ಚುನಾವಣೆ ಬಂದಾಗ ಪ್ರವಾಸ ಹೋಗುವುದನ್ನು ಬಿಟ್ಟು, ದೇಶದ ಹಿತದೃಷ್ಟಿಯಿಂದ ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಆತ್ಮಸಾಕ್ಷಿಗೆ ಒಪ್ಪುವ ಸಾರ್ವಜನಿಕ ಕಳಕಳಿಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಮಮತಾ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಕರೇ ನಾಡಿನ ಆಸ್ತಿ. ಪ್ರಸ್ತುತ ಶೇ. 25ರಷ್ಟು ಮತದಾರರು ಮತದಾನದ ಬಗ್ಗೆ ನಿರಾಸಕ್ತಿ ತೋರಿಸುತ್ತಿರುವುದು ವಿಷಾದನೀಯ ಎಂದರು.
ವಕೀಲರ ಸಂಘದ ಅಧ್ಯಕ್ಷ ಜ್ಞಾನಮೂರ್ತಿ ಮಾತನಾಡಿ, ಮತದಾರರು ತಮ್ಮ ಮತವನ್ನು ಹಣಕ್ಕೆ ಮಾರಾಟ ಮಾಡದೆ, ಅದರ ಪಾವಿತ್ರ್ಯ ಕಾಪಾಡಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಸಿ.ಎಸ್., ವಕೀಲ ಸಂದೀಪ್ ಸಿ.ಎಲ್., ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಬಸವರಾಜು ಮಾತನಾಡಿದರು.
ವಕೀಲ ಪ್ರಶಾಂತ್, ನವೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರವಿಕುಮಾರ್ ಸಿ. ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.