ADVERTISEMENT

ಸಿದ್ಧರಾಮಯ್ಯ ಜತೆ ಭಿನ್ನಾಭಿಪ್ರಾಯವಿಲ್ಲ: ಡಾ.ಜಿ.ಪರಮೇಶ್ಚರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 15:41 IST
Last Updated 27 ಸೆಪ್ಟೆಂಬರ್ 2019, 15:41 IST
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ   

ತುಮಕೂರು: ಸಿದ್ಧರಾಮಯ್ಯ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, 'ಗುರುವಾರ ಕೆಪಿಸಿಸಿ ಸಭೆಗೆ ಗೈರಾಗಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಸಭೆ 11.30 ಕ್ಕೆ ನಿಗದಿಯಾಗಿತ್ತು. ನಾನು ಚಿಕ್ಕಮಗಳೂರಿಗೆ ತೆರಳಿದ್ದರಿಂದ ಬರುವುದು ತಡವಾಗುತ್ತದೆ ಎಂದು ಅಧ್ಯಕ್ಷರಿಗೆ ಹೇಳಿದ್ದೆ. ಬೆಳಿಗ್ಗೆ 6 ಗಂಟೆಗೆ ಚಿಕ್ಕಮಗಳೂರಿಂದ ಹೊರಟಿದ್ದರೂ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

ಅಲ್ಲದೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಬೇಗ ಹೊರಡಬೇಕಾಗಿದ್ದರಿಂದ 9.30ಕ್ಕೆ ಸಭೆ ನಡೆಸಿದ್ದಾರೆ. ಸಭೆಗೆ ನಾನು ಗೈರಾಗಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

’ಕಳೆದ ವಾರವಷ್ಟೇ ಸಿದ್ಧರಾಮಯ್ಯ ಅವರೊಟ್ಟಿಗೆ ಕುಳಿತು ಸಭೆ ಮಾಡಿದ್ದೇವೆ. ಭಿನ್ನಾಭಿಪ್ರಾಯ ಎಲ್ಲಿ ಬಂತು. ಸಿದ್ಧರಾಮಯ್ಯ ಅವರಿಗೋಸ್ಕರ ನಾವೇನಿಲ್ಲ. ನಮಗೋಸ್ಕರ ಸಿದ್ಧರಾಮಯ್ಯ ಅವರಿಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೋಸ್ಕರ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಏನು ಕಾರಣ ಎಂಬುದು ನನಗೆ ಗೊತ್ತಿಲ್ಲ. ನಮ್ಮವರೇ ನನ್ನ ಸೋಲಿಗೆ ಕಾರಣ ಎಂದು ಮುನಿಯಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದಿದ್ದೇನೆ. ಅದನ್ನು ಪರಿಶೀಲಿಸಿ ಪಕ್ಷದ ಅಧ್ಯಕ್ಷರು ಮುಂದಿನ ಕ್ರಮ ಕೈಗೊಳ್ಳುತ್ತಾರೆ’ ಎಂದರು.

‘ನಮ್ಮಲ್ಲಿ ವಲಸೆ- ಮೂಲ ಕಾಂಗ್ರೆಸ್ ಎಂಬುದು ಇಲ್ಲ. ಎಲ್ಲರೂ ಸಮಾನರೇ. ಸಿದ್ದರಾಮಯ್ಯ ಈಗಲೂ ನಮ್ಮ ನಾಯಕರೇ. ಮೃದು ಧೋರಣೆ ಇರುವುದರಿಂದಲೇ ನನಗೆ ಹಿನ್ನಡೆಯಾಗುತ್ತಿದೆ ಎಂದು ಭಾವಿಸುವುದು ತಪ್ಪು. ಆ ಮೃದು ಧೋರಣೆಯಿಂದಲೇ ಉಪಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ನನಗೆ ಯಾವುದೇ ಹಿನ್ನಡೆ ಆಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.