ADVERTISEMENT

ತುಮಕೂರು| ಬ್ಯಾಂಕ್‌ ಹೆಸರಲ್ಲಿ ಲಿಂಕ್‌ ಕಳಿಸಿ ₹8 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 4:17 IST
Last Updated 26 ಜನವರಿ 2026, 4:17 IST
ಸೈಬರ್‌ ಕ್ರೈಮ್‌
ಸೈಬರ್‌ ಕ್ರೈಮ್‌   

ತುಮಕೂರು: ಯೂನಿಯನ್‌ ಬ್ಯಾಂಕ್‌ ಹೆಸರಿನಲ್ಲಿ ಬಂದ ಎಪಿಕೆ ಫೈಲ್‌ ಕ್ಲಿಕ್‌ ಮಾಡಿ, ಮಧುಗಿರಿಯ ಎಂ.ಎನ್‌.ದೇವರಾಜು ಎಂಬುವರು ₹8.55 ಲಕ್ಷ ಕಳೆದುಕೊಂಡಿದ್ದಾರೆ.

ದೇವರಾಜು ಯೂನಿಯನ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಜ. 19ರಂದು ಅವರ ಮೊಬೈಲ್‌ಗೆ ಬ್ಯಾಂಕ್‌ ಹೆಸರಿನಲ್ಲಿ ಎ‍ಪಿಕೆ ಫೈಲ್‌ ಬಂದಿದೆ. ಬ್ಯಾಂಕ್‌ನಿಂದಲೇ ಕಳುಹಿಸಿರಬಹುದು ಎಂದು ದೇವರಾಜು ಅದನ್ನು ಇನ್‌ಸ್ಟಾಲ್‌ ಮಾಡಿದ್ದಾರೆ. ಅದೇ ದಿನ ಅವರ ಖಾತೆಯಿಂದ ಎರಡು ಹಂತದಲ್ಲಿ ₹8.55 ಲಕ್ಷ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ.

ಎಪಿಕೆ ಫೈಲ್‌ ಕಳುಹಿಸಿದ ವಂಚಿಸಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕು. ಹಣ ವಾಪಸ್‌ ಕೊಡಿಸಬೇಕು ಎಂದು ಜ. 23ರಂದು ದೇವರಾಜು ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ADVERTISEMENT

ಶಿಕ್ಷಕಿಗೆ ₹5 ಲಕ್ಷ ಮೋಸ: ಮನೆಯಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಾ, ಉತ್ತಮ ಲಾಭ ಗಳಿಸಬಹುದು ಎಂದು ನಂಬಿಸಿ ಪಾವಗಡ ತಾಲ್ಲೂಕಿನ ಗುಜ್ಜಾರಹಳ್ಳಿಯ ಶಿಕ್ಷಕಿ ಜಿ.ಆರ್‌.ಮೀನಾಕ್ಷಿ ಎಂಬುವರಿಗೆ ₹5.45 ಲಕ್ಷ ವಂಚಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಕೆಲಸದ ಕುರಿತು ಜಾಹೀರಾತು ಕ್ಲಿಕ್‌ ಮಾಡಿದ್ದು, ಅವರ ನಂಬರ್‌ ಅನ್ನು ಗ್ರೂಪ್‌ಗೆ ಸೇರಿಸಲಾಗಿದೆ.

ಮೊದಲಿಗೆ ಹೋಟೆಲ್‌ಗಳಿಗೆ ರೇಟಿಂಗ್ಸ್‌ ನೀಡುವ ಟಾಸ್ಕ್‌ ಬಗ್ಗೆ ತಿಳಿಸಿದ್ದಾರೆ. ಮೀನಾಕ್ಷಿ ಟಾಸ್ಕ್‌ ಪೂರ್ಣಗೊಳಿಸಿದ ಮೇಲೆ ಅವರ ಖಾತೆಗೆ ₹370 ವರ್ಗಾಯಿಸಿದ್ದಾರೆ. ನಂತರ ₹800 ಪಡೆದು ₹1,040 ವಾಪಸ್‌ ಹಾಕಿದ್ದಾರೆ. ಟಾಸ್ಕ್‌ ಪಡೆಯಲು ಇನ್ನೂ ಹೆಚ್ಚಿನ ಮೊತ್ತ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಮೀನಾಕ್ಷಿ ಹಂತ ಹಂತವಾಗಿ ಒಟ್ಟು ₹5,45,829 ವರ್ಗಾಯಿಸಿದ್ದಾರೆ. ಹಣ ವಾಪಸ್‌ ಕೇಳಿದಾಗ ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸ್ನೇಹಿತರ ಬಳಿ ವಿಚಾರಿಸಿದಾಗ ವಂಚನೆಗೆ ಒಳಗಾದ ವಿಷಯ ಗೊತ್ತಾಗಿದೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.