ADVERTISEMENT

ಅಂಗಾಂಗ ದಾನ: ಜಾಗೃತಿಗೆ ಸಲಹೆ

4,700 ಮಂದಿ ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:56 IST
Last Updated 10 ಡಿಸೆಂಬರ್ 2025, 5:56 IST
ಅಂಗಾಂಗ ದಾನ (ಪ್ರಾತಿನಿಧಿಕ ಚಿತ್ರ)
ಅಂಗಾಂಗ ದಾನ (ಪ್ರಾತಿನಿಧಿಕ ಚಿತ್ರ)   

ತುಮಕೂರು: ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಜನರು ಅಂಗಾಂಗ ದಾನಕ್ಕೆ ಮುಂದಾಗುತ್ತಿಲ್ಲ ಎಂದು ಬೆಂಗಳೂರು ಮಿಲ್ಲರ್ಸ್ ರಸ್ತೆ ಮಣಿಪಾಲ್ ಆಸ್ಪತ್ರೆ ಮೂತ್ರಪಿಂಡ ತಜ್ಞ ಡಾ.ಇ.ಎನ್.ರಾಜೀವ್, ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ್ ಅನಯ್ಯರೆಡ್ಡಿ ಇಲ್ಲಿ ಮಂಗಳವಾರ ಹೇಳಿದರು.

ಪ್ರತಿ ವರ್ಷ ಲಕ್ಷಾಂತರ ಮಂದಿ ಅಂಗಾಂಗ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ. ದಾನಿಗಳ ಕೊರತೆ, ಜಾಗೃತಿ ಮೂಡದೆ ಅತ್ಯಲ್ಪ ಜನರಿಗಷ್ಟೇ ಅಂಗಾಂಗ ಕಸಿ ಸಾಧ್ಯವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕು. ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂಗಾಂಗ ಕಸಿಯಲ್ಲಿ ಕರ್ನಾಟಕ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಈ ವರ್ಷ 166 ಮಂದಿ 800ಕ್ಕೂ ಹೆಚ್ಚು ಅಂಗಾಂಗ ದಾನ ಮಾಡಿದ್ದು, ಅಂಗಾಂಶ ಕಸಿ ಮಾಡಲು ಸಾಧ್ಯವಾಗಿದೆ. ಆದರೆ ರಾಜ್ಯದಲ್ಲಿ ಇನ್ನೂ ಸುಮಾರು 4,700ಕ್ಕೂ ಹೆಚ್ಚು ಮಂದಿ ಮೂತ್ರಪಿಂಡಕ್ಕಾಗಿ ಕಾಯುತ್ತಿದ್ದಾರೆ. ಮತ್ತಷ್ಟು ಜನರು ಯಕೃತ್ತು, ಹೃದಯ, ಶ್ವಾಸಕೋಶದ ಕಸಿಗಾಗಿ ಕಾಯುತ್ತಿದ್ದಾರೆ. ಅಂಗಾಂಗ ದಾನ ನೀಡಲು ಜನರು ಮುಂದೆ ಬಂದರೆ ಹಲವರ ಪ್ರಾಣ ಉಳಿಸಬಹುದು ಎಂದು ಸಲಹೆ ಮಾಡಿದರು.

ಮೂತ್ರಪಿಂಡ ಸಮಸ್ಯೆಗೆ ಸಿಲುಕಿದವರು ಡಯಾಲಿಸ್‌ನಿಂದ ಬದುಕುಳಿಯಲು ನೆರವಾಗುತ್ತದೆ. ದೀರ್ಘ ಕಾಲದಲ್ಲಿ ಮೂತ್ರಪಿಂಡ ಕಸಿ ಮಾಡಿಸದಿದ್ದರೆ ಬದುಕುಳಿಯುವುದು ಕಷ್ಟಕರವಾಗುತ್ತದೆ. ಐವರಲ್ಲಿ ಒಬ್ಬರು ಮಾತ್ರ ಐದು ವರ್ಷಗಳ ವರೆಗೆ ಬದುಕಿ ಉಳಿಯುತ್ತಾರೆ. ಮಧುಮೇಹದಿಂದ ಮೂತ್ರಪಿಂಡ ಸಮಸ್ಯೆಗೆ ಸಿಲುಕಿದವರಿಗೆ ನೆರವಿನ ಅಗತ್ಯವಿದೆ ಎಂದರು.

ದೇಶದಲ್ಲಿ ಮೆದುಳಿನ ಸಾವನ್ನು (ಬ್ರೈನ್ ಡೆತ್) ಕಾನೂನುಬದ್ಧವಾಗಿ ಸಾವು ಎಂದೇ ಪರಿಗಣಿಸಲಾಗುತ್ತದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಹಲವರಿಗೆ ಈ ಬಗ್ಗೆ ತಿಳಿವಳಿಕೆ ಇಲ್ಲವಾಗಿದೆ. ಜನರಲ್ಲಿನ ನಂಬಿಕೆ, ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳಲು ತಡ ಮಾಡುವುದು, ವೈದ್ಯಕೀಯ ಕಾನೂನುಗಳು, ಅಪಘಾತದ ಸಮಯದಲ್ಲಿ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ಮಾಡಬೇಕಿದ್ದು, ಮೆದುಳು ಹಸ್ತಾಂತರಕ್ಕೆ ವಿಳಂಬವಾಗುತ್ತಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.