ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ
ತುಮಕೂರು: ತುಮಕೂರು ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ಕೆ.ಎನ್.ರಾಜಣ್ಣ ಒಮ್ಮೆಲೆ ಗೃಹ ಸಚಿವ ಜಿ.ಪರಮೇಶ್ವರ ವಿರುದ್ಧ ಸಿಡಿದೆದ್ದಿರುವುದು ಏಕೆ? ಎಂಬ ಪ್ರಶ್ನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಮೂಡಿದೆ.
ಇಬ್ಬರು ನಾಯಕರ ಬೆಂಬಲಿಗರು ತಮ್ಮದೇ ರೀತಿಯಲ್ಲಿ ರಾಜಣ್ಣ ಹೇಳಿಕೆಯನ್ನು ವಿಶ್ಲೇಷಿಸುತ್ತಿದ್ದಾರೆ. ಎಲ್ಲವೂ ‘ಅಧಿಕಾರ’ದ ಸುತ್ತಲೇ ಗಿರಕಿ ಸುತ್ತುತ್ತಿದೆ. ಪರಮೇಶ್ವರ ಅವರನ್ನು ದಲಿತ ಸಮುದಾಯದ ಒಂದು ವರ್ಗಕ್ಕೆ ಹಾಗೂ ರಾಜಣ್ಣ ಅವರನ್ನು ಹಿಂದುಳಿದ ವರ್ಗಗಳ ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಮಾತುಗಳು ಎರಡೂ ಕಡೆಯಿಂದಲೂ ವ್ಯಕ್ತವಾಗುತ್ತಿವೆ. ಮುಂದಿನ ದಿನಗಳಲ್ಲಿ ಇದು ಜಿಲ್ಲೆಯ ರಾಜಕಾರಣದಲ್ಲಿ ಯಾವ ಸ್ವರೂಪ, ತಿರುವು ಪಡೆದುಕೊಳ್ಳಲಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
‘ಸಚಿವ ಪರಮೇಶ್ವರ ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ಏಕೆ ನಿಲ್ಲಬಾರದು. ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಮೀಸಲು ಕ್ಷೇತ್ರದಿಂದ ಮತ್ತೊಬ್ಬರಿಗೆ ಸಹಾಯ ಆಗುವುದಿಲ್ಲವೇ? ಮೀಸಲು ಕ್ಷೇತ್ರ ಬಿಟ್ಟುಕೊಡುವ ಮನಃಸ್ಥಿತಿ ಬರಬೇಕು. ಎಲ್ಲವನ್ನು ನಾವೇ ಬಳಸಿಕೊಂಡರೆ ಬೇರೆಯವರು ಎಲ್ಲಿಗೆ ಹೋಗುತ್ತಾರೆ?’ ಎಂದು ರಾಜಣ್ಣ ಸಾರ್ವಜನಿಕ ವೇದಿಕೆಯಲ್ಲಿ ಪ್ರಶ್ನಿಸಿದ್ದಾರೆ. ‘ಆರ್‌ಎಸ್‌ಎಸ್ ಸೇರಿದಂತೆ ಸಂಘ, ಸಂಸ್ಥೆಗಳು ಅನುಮತಿ ಪಡೆದು ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಬೇಕು’ ಎಂಬ ನಿಯಮ ರೂಪಿಸಿರುವುದನ್ನೂ ಟೀಕಿಸಿದ್ದಾರೆ. ಈ ಮಾತುಗಳು ರಾಜಕೀಯ ವಲಯದಲ್ಲಿ ಹಲವು ಅರ್ಥ ಹಾಗೂ ವಿಶೇಷಗಳನ್ನು ಧ್ವನಿಸುತ್ತಿದೆ.
ಒಮ್ಮೆಲೆ, ಇದ್ದಕ್ಕಿದ್ದಂತೆ ಈ ವಿಚಾರ ಏಕೆ ಮುನ್ನೆಲೆಗೆ ಬಂತು ಎಂಬ ಪ್ರಶ್ನೆ ಸಹಜವಾಗಿ ಇಬ್ಬರು ನಾಯಕರ ಬೆಂಬಲಿಗರಲ್ಲಿ ಮೂಡುವಂತೆ ಮಾಡಿದೆ. ‘ಅಧಿಕಾರ ಕಳೆದುಕೊಂಡು ಹತಾಶರಾಗಿ ಈ ರೀತಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮತ್ತೊಮ್ಮೆ ಅಧಿಕಾರ ಸಿಗುವುದಿಲ್ಲ ಎಂಬುದು ಖಚಿತವಾದ ನಂತರ ಇಂತಹ ಮಾತುಗಳು ಹೊರಗೆ ಬರುತ್ತಿವೆ. ಪಕ್ಷ ಹಾಗೂ ಸರ್ಕಾರದ ಭಾಗವಾಗಿದ್ದಾಗಲೂ ಪಕ್ಷ, ನಾಯಕತ್ವ, ಸರ್ಕಾರಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಈಗ ಅದು ಮತ್ತಷ್ಟು ಜೋರಾಗಬಹುದು’ ಎಂದು ಪರಮೇಶ್ವರ ಬೆಂಬಲಿಗರು ಹೇಳುತ್ತಿದ್ದಾರೆ.
‘ರಾಜಣ್ಣ ಹೇಳಿರುವುದರಲ್ಲಿ ತಪ್ಪೇನಿದೆ? ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಹಾಗಂತ ನಿಜ ಹೇಳಲೇ ಬಾರದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪರಮೇಶ್ವರ ಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ನಾಯಕತ್ವ ವಹಿಸಿಕೊಳ್ಳುವ ಸಾಮರ್ಥ್ಯ ಇರುವಂತಹ ನಾಯಕರು ಏಕೆ ಸದಾ ಮೀಸಲು ಕ್ಷೇತ್ರ ಆಶ್ರಯಿಸಬೇಕು. ಸಾಮಾನ್ಯ ಕ್ಷೇತ್ರದಲ್ಲಿ ನಿಂತು ತಮ್ಮ ‘ಶಕ್ತಿ’ ತೋರ್ಪಡಿಸಲಿ. ಆಗ ರಾಜ್ಯ ನಾಯಕತ್ವ ಕೇಳಲು ಸಮರ್ಥರು ಎನ್ನಬಹುದು. ಅದೇ ಉದ್ದೇಶದಿಂದ ಈ ಮಾತು ಹೇಳಿರಬಹುದು’ ಎಂದು ರಾಜಣ್ಣ ಬೆಂಬಲಿಗರು ಸಮರ್ಥಿಸುತ್ತಿದ್ದಾರೆ.
ರಾಜಣ್ಣ ಅಧಿಕಾರ ಕಳೆದುಕೊಂಡ ಸಮಯದಲ್ಲಿ ಜಿಲ್ಲೆಯವರೇ ಆದ ಪರಮೇಶ್ವರ ಬೆಂಬಲಕ್ಕೆ ನಿಲ್ಲಲಿಲ್ಲ. ನಂತರವೂ ಅಧಿಕಾರ ಕೊಡಿಸಲು ಪ್ರಯತ್ನಿಸುತ್ತಿಲ್ಲ. ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಸ್ಥಾನವನ್ನು ಕೆಲವೇ ದಿನಗಳ ಅಂತರದಲ್ಲಿ ಕಳೆದುಕೊಳ್ಳಬೇಕಾಯಿತು. ರಾಜ್ಯ ಹಾಗೂ ಜಿಲ್ಲೆಯಲ್ಲಿ ತಮ್ಮ ಮಾತು ನಡೆಯದಾಯಿತು. ಒಂದು ರೀತಿಯಲ್ಲಿ ರಾಜಕೀಯವಾಗಿ ಹಿನ್ನಡೆ? ಎಂಬ ಭಾವನೆ ರಾಜಣ್ಣ ಮನದಲ್ಲಿ ಮೂಡಿರಬಹುದು ಎಂದು ಅವರನ್ನು ಹತ್ತಿರದಿಂದ ಬಲ್ಲವರು ವಿಶ್ಲೇಷಿಸುತ್ತಿದ್ದಾರೆ.
ಪಕ್ಷದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರನ್ನು ಟೀಕಿಸುತ್ತಿದ್ದ ರಾಜಣ್ಣ ದೃಷ್ಟಿ ಈಗ ಜಿಲ್ಲಾ ಮಟ್ಟದ ನಾಯಕರ ಮೇಲೆ ಬಿದ್ದಿದೆ. ಇದು ಇಲ್ಲಿಗೆ ನಿಲ್ಲುವುದೋ? ಮುಂದುವರಿಯುವುದೋ? ರಾಜಕೀಯ ಹೇಳಿಕೆಗೆ ಸೀಮಿತಗೊಳ್ಳುವುದೋ? ವೈಯಕ್ತಿಕ ನೆಲೆಯತ್ತ ಸಾಗುವುದೋ? ಎಂಬುದನ್ನು ಕಾದು ನೋಡಬೇಕಿದೆ.
ಹಿಂದೆಯೂ ನಡೆದಿತ್ತು ಜಟಾಪಟಿ
ಯಾರು ಏನೇ ಹೇಳಿದರೂ ಇಬ್ಬರು ನಾಯಕರ ನಡುವೆ ಒಂದಷ್ಟು ಅಂತರ ಇದ್ದೇ ಇದೆ. ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದು ಬಹಿರಂಗವಾಗಿ ಚರ್ಚೆಯಾಗುತ್ತಲೇ ಬಂದಿವೆ. ಒಮ್ಮೆ ಒಟ್ಟಾಗಿ ಇರುವಂತೆ ಕಂಡು ಬಂದರೆ ಮತ್ತೊಮ್ಮೆ ಬದ್ಧ ವೈರಿಗಳಂತೆ ನಡೆದುಕೊಂಡಿರುವುದು ಉಂಟು. ದಶಕಗಳಿಂದ ಜಿಲ್ಲೆಯ ರಾಜಕಾರಣ ಬಲ್ಲವರು ಇಬ್ಬರ ನಡುವಿನ ‘ಬಾಂಧವ್ಯ’ ಕಂಡಿದ್ದಾರೆ. ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಹಿಂದೆ ಪರಮೇಶ್ವರ ಗೃಹ ಸಚಿವರಾಗಿದ್ದಾಗ ‘ಜೀರೋ ಟ್ರಾಫಿಕ್’ ವ್ಯವಸ್ಥೆಯಲ್ಲಿ ಸಂಚರಿಸುತ್ತಿದ್ದರು. ನಗರದಲ್ಲಿ ಇದರಿಂದ ಜನರು ಸಾಕಷ್ಟು ಕಿರಿಕಿರಿ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಗಮನಿಸಿದ ರಾಜಣ್ಣ ನೇರವಾಗಿ ಪ್ರಶ್ನಿಸಿದ್ದರು. ‘ಜೀರೋ ಟ್ರಾಫಿಕ್’ ಸಚಿವ ಎಂದೆಲ್ಲ ಸಾರ್ವಜನಿಕವಾಗಿ ಗೇಲಿಮಾಡಿ ಜರಿದಿದ್ದರು. ಈ ಸಮಯದಲ್ಲಿ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿತ್ತು. ಟೌನ್‌ಹಾಲ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳ ಬದಿಯ ಗೋಡೆಗಳ ಮೇಲೆ ರಾತ್ರೋರಾತ್ರಿ ಅಕ್ಷರಗಳು ಮೂಡಿದ್ದವು. ಬೆಂಬಲಿಗರ ನಡುವೆ ಹೊಡೆದಾಟವೂ ನಡೆದಿತ್ತು. ಪರಮೇಶ್ವರ ಬೆಂಬಲಿಗರೊಬ್ಬರು ಇದ್ದ ಮನೆಯ ಮೇಲೆ ಪೊಲೀಸ್ ದಾಳಿಯನ್ನೂ ನಡೆಸಲಾಗಿತ್ತು. ಪ್ರಕರಣಗಳೂ ದಾಖಲಾಗಿದ್ದವು. ಈ ಎಲ್ಲ ಬೆಳವಣಿಗೆಗಳ ನಂತರ ಇಬ್ಬರನ್ನೂ ಸಮಾಧಾನ ಮಾಡಲಾಗಿತ್ತು. ಇಬ್ಬರು ಒಟ್ಟಿಗೆ ಸಾಗುತ್ತಿದ್ದ ಸಮಯದಲ್ಲಿ ಈಗ ಇದ್ದಕ್ಕಿದ್ದಂತೆ ಏಕೆ ಪರಮೇಶ್ವರ ಅವರನ್ನು ರಾಜಣ್ಣ ಕೆಣಕಿದ್ದಾರೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.