ADVERTISEMENT

ಅರಸೀಕೆರೆ ಠಾಣೆಯಲ್ಲಿ ಸಿಬ್ಬಂದಿ ಕೊರತೆ | ಜನ ಹೈರಾಣು: ಪೊಲೀಸರಿಗೆ ತಲೆನೋವು

ಕೆ.ಆರ್.ಜಯಸಿಂಹ
Published 2 ಫೆಬ್ರುವರಿ 2026, 6:51 IST
Last Updated 2 ಫೆಬ್ರುವರಿ 2026, 6:51 IST
ಅರಸೀಕೆರೆ ಪೊಲೀಸ್‌ ಠಾಣೆ
ಅರಸೀಕೆರೆ ಪೊಲೀಸ್‌ ಠಾಣೆ   

ಪಾವಗಡ: ತಾಲ್ಲೂಕಿನ ನಿಡಗಲ್‌ ಹೋಬಳಿ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದರೆ, ಇರುವ ಬೆರಳೆಣಿಕೆಯಷ್ಟು ಸಿಬ್ಬಂದಿ ಹೆಚ್ಚುವರಿ ಕೆಲಸದ ಹೊರೆಯಿಂದಾಗಿ ಒತ್ತಡಕ್ಕೆ ಸಿಲುಕಿದ್ದಾರೆ.

ಬಹುತೇಕ ಆಂಧ್ರದ ಗಡಿ ಹಂಚಿಕೊಂಡಿರುವ ನಿಡಗಲ್‌ ಹೋಬಳಿಯ ಗ್ರಾಮಗಳು, ಲಿಂಗದಹಳ್ಳಿ, ಸಾಸಲಕುಂಟೆ, ರಂಗಸಮುದ್ರ, ದೊಡ್ಡೇನಹಳ್ಳಿ, ಗೋವರ್ಧನಗಿರಿ, ಜೂಲಪ್ಪನಪಾಳ್ಯ, ಪೆನ್ನೋಬನಹಳ್ಳಿ, ಸಾಸಲಕುಂಟೆ, ಕೆಂಚಮ್ಮನಹಳ್ಳಿ ಸೇರಿದಂತೆ ಕೆಲ ವೈ.ಎನ್‌. ಹೊಸಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳು ಠಾಣಾ ವ್ಯಾಪ್ತಿಗೆ ಒಳಪಡುತ್ತವೆ. ಬಹುತೇಕ ಗ್ರಾಮಗಳು ಠಾಣೆಯಿಂದ 30 ಕಿ.ಮೀ. ದೂರದಲ್ಲಿವೆ.

ಸಚಿವರು, ರಾಜಕಾರಣಿಗಳ ಭದ್ರತೆ, ಸಭೆ ಇತ್ಯಾದಿ ಕೆಲಸಗಳ ನಿಮಿತ್ತ ಇರುವ ಸಿಬ್ಬಂದಿಯನ್ನು ನಿಯೋಜಿಸಿದರೆ ಬೆರಳೆಣಿಕೆ ಸಿಬ್ಬಂದಿ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಠಾಣಾ ವ್ಯಾಪ್ತಿಯ ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಠಾಣೆಗೆ ಬರುವ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಅಲೆದಾಡುವಂತಾಗಿದೆ.

ADVERTISEMENT

ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಷಕ್ಕೆ ಒಂದೆರೆಡು ರಜೆಯೂ ಸಿಗದೆ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಸಿಬ್ಬಂದಿ ಗೋಳು ವಿವರಿಸುತ್ತಾರೆ.

ಜಾಸ್ತಿಯಾಗದ ಹುದ್ದೆ:

ಈ ಹಿಂದೆ ಇದ್ದ 32 ಹುದ್ದೆಗಳ ಪೈಕಿ ಹೆಡ್‌ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ಗಳ ಐದು ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಅವುಗಳಲ್ಲಿಯೂ ಬಹುತೇಕ ಖಾಲಿ ಇವೆ. ಅಗತ್ಯಕ್ಕೆ ತಕ್ಕಂತೆ ಕಾಲ ಕಾಲಕ್ಕೆ ಸಿಬ್ಬಂದಿ ಹುದ್ದೆಗಳನ್ನು ಹೆಚ್ಚು ಮಾಡಿಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದು ಸಿಬ್ಬಂದಿ ಕೊರತೆಗೆ ಕಾರಣವಾಗಿದೆ.

ವಸತಿ ನಿಲಯದಲ್ಲಿ ಸೌಕರ್ಯಗಳ

ಕೊರತೆ: ಪೊಲೀಸ್‌ ವಸತಿ ನಿಯದಲ್ಲಿನ ಮೂಲಸೌಕರ್ಯಗಳ ಕೊರತೆ ಸಿಬ್ಬಂದಿಗೆ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ವಸತಿ ನಿಲಯ ಸಂಪೂರ್ಣ ಶಿಥಿಲಗೊಂಡು ಯಾವಾಗ ಏನಾಗುವುದೋ ಎಂಬ ಆತಂಕದಲ್ಲಿ ಪೊಲೀಸ್‌ ಸಿಬ್ಬಂದಿ, ಕುಟುಂಬ ಸದಸ್ಯರು ದಿನ ದೂಡುತ್ತಿದ್ದಾರೆ. 

ಸಂಚಾರಿ ನಿಯಮ ಪಾಲನೆ ಪೋಕ್ಸೊ ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ತಂಡ ರೂಪಿಸುವ ಅಗತ್ಯವಿದೆ. ತಾಲ್ಲೂಕಿನ ಪೊಲೀಸ್‌ ಸಿಬ್ಬಂದಿ ಕೊರತೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. 
ಆರ್‌.ರಮೇಶ್‌, ಅಟ್ರಾಸಿಟಿ ಸಮಿತಿ ಸದಸ್ಯ
ನಿಡಗಲ್‌ ಹೋಬಳಿ ಅರಸೀಕೆರೆ ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಶೇ 80ರಷ್ಟು ಗ್ರಾಮಗಳು ಆಂಧ್ರದ ಗಡಿ ಹಂಚಿಕೊಂಡಿರುವುದರಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು.
ಲೋಕೇಶ್‌ ಪಾಳೇಗಾರ್‌ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ
ಆಂಧ್ರದ ಗಡಿಯಲ್ಲಿ ಸದಾ ಅಪರಾಧ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅಲ್ಲಿನ ಪೊಲೀಸರಿಂದ ತಪ್ಪಿಸಿಕೊಂಡು ಗಡಿಯೊಳಗೆ ಪ್ರವೇಶಿಸುವವರ ಮೇಲೆ ನಿಗಾ ವಹಿಸುವ ಅನಿವಾರ್ಯತೆ ಇದೆ. ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಠಾಣೆಗೆ ಈಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಆದ್ಯತೆ ಮೇರೆಗೆ ಹೆಚ್ಚುವರಿ ಹುದ್ದೆ ಸೃಷ್ಟಿಸಬೇಕು.
ಎಂ.ನಾಗರಾಜು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ
ಲಿಂಗದಹಳ್ಳಿ ರಂಗಸಮುದ್ರ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಈ ಭಾಗದ ಗ್ರಾಮಗಳು ಆಂಧ್ರ ಹಾಗೂ ಚಳ್ಳಕೆರೆ ತಾಲ್ಲೂಕಿನ ಗಡಿಯನ್ನೂ ಹಂಚಿಕೊಂಡಿವೆ. ಹೀಗಾಗಿ ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಲಿಂಗದಹಳ್ಳಿ ಗಡಿಯಲ್ಲಿ ಹೊರಠಾಣೆ ಸ್ಥಾಪಿಸಿ ಸಿಬ್ಬಂದಿ ಸೌಕರ್ಯಗಳನ್ನು ಕಲ್ಪಿಸಬೇಕು.
ಎಲ್‌.ಹನುಮೇಶ್‌ ಲಿಂಗದಹಳ್ಳಿ ಗ್ರಾ.ಪಂ. ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.