
ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿಯ ಮಂಗಳವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆಯೇ ಪ್ರಮುಖ ಸಮಸ್ಯೆ. ಹಲ ದಶಕಗಳಿಂದಲೂ ಇಲ್ಲಿ ಅಗತ್ಯಕ್ಕೆ ತಕ್ಕಂತೆ ವೈದ್ಯರನ್ನು ನಿಯೋಜಿಸಿಲ್ಲ. ಓರ್ವ ವೈದ್ಯರು ವಾರದಲ್ಲಿ ಕೇವಲ 3 ದಿನ ಮಾತ್ರ ನಿಯೋಜನೆ ಮೇರೆಗೆ ಆಸ್ಪತ್ರೆಗೆ ಆಗಮಿಸುತ್ತಾರೆ. ಉಳಿದ ದಿನ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿರುವುದಿಲ್ಲ. ವೈದ್ಯರೇ ಇಲ್ಲದ ಮೇಲೆ ಆರೋಗ್ಯ ಕೇಂದ್ರ ಇದ್ದರೂ ಈ ಭಾಗದ ಜನತೆಗೆ ಯಾವುದೇ ಪ್ರಯೋಜನವಿಲ್ಲ.
ವೈದ್ಯರು ಇಲ್ಲದ ವೇಳೆಯಲ್ಲಿ ನರ್ಸ್‌ಗಳೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಅನಿವಾರ್ಯತೆ ಇದೆ. ಆಸ್ಪತ್ರೆ 24 x 7ಗೆ ಬದಲಾಗಿ ಸಂಜೆಯವರೆಗೆ ಮಾತ್ರ ಅಂದರೆ ಕಚೇರಿ ಅವಧಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಉಳಿದಂತೆ ಬಾಗಿಲು ಮುಚ್ಚಿರುತ್ತದೆ ಎಂಬ ಆರೋಪ ಜನತೆಯಿಂದ ಕೇಳಿ ಬರುತ್ತಿದೆ.
ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳೂ ಇರುವುದಿಲ್ಲ. ಹೀಗಾಗಿ ಖಾಸಗಿ ಔಷಧಿ ಮಳಿಗೆಗಳಿಂದ ಔಷಧಿ ತರುವಂತೆ ಕಳುಹಿಸಲಾಗುತ್ತದೆ. ಹೊರಗಿನಿಂದ ಕೊಂಡು ತಂದ ಔಷಧಿ ಬಳಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ರೋಗಿಗಳು ದೂರುತ್ತಾರೆ.
ಚಿಕಿತ್ಸೆ ನೀಡುವ ಮುನ್ನ ಆಧಾರ್, ಪಡಿತರ ಚೀಟಿ ಕಡ್ಡಾಯವಾಗಿ ನೀಡುವಂತೆ ಸಿಬ್ಬಂದಿ ಕೇಳುತ್ತಾರೆ. ಆಧಾರ್, ಪಡಿತರ ಚೀಟಿ ನೀಡದಿದ್ದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ರೋಗಿಗಳು ತುರ್ತು ಸಂದರ್ಭದಲ್ಲಿ ಆಧಾರ್, ಪಡಿತರ ಚೀಟಿ ಜೇಬಿನಲ್ಲಿ ಅಥವಾ ಬಳಿಯಲ್ಲಿಟ್ಟುಕೊಂಡಿರಲು ಸಾಧ್ಯವೇ? ಇದೆಂತಹ ಅಮಾನವೀಯ ಪ್ರಕ್ರಿಯೆ ಎಂಬುದು ಜನತೆಯ ಪ್ರಶ್ನೆ.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ವಾಹನ ಲಭ್ಯವಿರುವುದಿಲ್ಲ. ಲಿಂಗದಹಳ್ಳಿ, ಕೆ.ಟಿ ಹಳ್ಳಿ ಪಟ್ಟಣದಿಂದ ತುರ್ತು ವಾಹನ ಆಗಮಿಸುವ ವೇಳೆಗೆ ರೋಗಿಯ ಸ್ಥಿತಿ ಗಂಭೀರವಾಗಿರುತ್ತದೆ. ಆಟೊ ಸೇರಿದಂತೆ ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಮಾರ್ಗ ಮಧ್ಯದಲ್ಲಿಯೇ ಖಾಸಗಿ ವಾಹನಗಳಲ್ಲಿ ಹೆರಿಗೆ ಆಗಿರುವ, ರೋಗಿಗಳು ಉಸಿರು ಚೆಲ್ಲಿರುವ ಸಾಕಷ್ಟು ನಿದರ್ಶನಗಳನ್ನು ಈ ಭಾಗದವರು ತಿಳಿಸುತ್ತಾರೆ.
ಆಸ್ಪತ್ರೆಯಲ್ಲಿರುವ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆ ಮಾಡಲು ಅಗತ್ಯವಿರುವ ಸಲಕರಣೆಗಳಿಲ್ಲ. ಇರುವ ಸಲಕರಣೆ ಬಳಸದೆ, ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿವೆ. ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳಿಗಾಗಿ ಖಾಸಗಿ ಪ್ರಯೋಗಾಲಯಕ್ಕೆ ಹೋಗಬೇಕು. ಬಡ ರೋಗಿಗಳಿಗೆ ಇದು ಹೊರೆಯಾಗಿ ಪರಿಣಮಿಸುತ್ತಿದೆ.
ಆಸ್ಪತ್ರೆಯ ಬಳಿ ಸಿಬ್ಬಂದಿಗಾಗಿ ಇರುವ ವಸತಿ ನಿಲಯದಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ವಾಸಿಸಲು ಯೋಗ್ಯವಿಲ್ಲ. ಹೀಗಾಗಿ ವಸತಿ ನಿಲಯ ಇದ್ದರೂ ಸಿಬ್ಬಂದಿ ಬೇರೆಡೆಯಿಂದ ಆಸ್ಪತ್ರೆಗೆ ಓಡಾಡಬೇಕು. ವಸತಿ ಗೃಹಗಳು ಮಳೆಗಾಲದಲ್ಲಿ ಸೋರುತ್ತವೆ, ಬೇಸಿಗೆಯಲ್ಲಿ ಚಾವಣಿಯಿಂದ ಸಿಮೆಂಟ್ ಬೀಳುತ್ತದೆ. ಹೀಗಾಗಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ವಸತಿ ಗೃಹ ನಿರುಪಯುಕ್ತವಾಗಿದೆ.
ತುರ್ತು ವಾಹನ, ಶೌಚಾಲಯದ ಅಸಮರ್ಪಕ ನಿರ್ವಹಣೆ, ಸಿಬ್ಬಂದಿ, ವೈದ್ಯರ ಕೊರತೆ, ಔಷಧಿಗಳ ಅಭಾವ, ಕಾರ್ಯ ನಿರ್ವಹಿಸದ ಪ್ರಯೋಗಾಲಯದಿಂದ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ, ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಇಲ್ಲಿನ ಜನತೆಗೆ ಸಮರ್ಪಕ ವೈದ್ಯಕೀಯ ಸೇವೆ ಕಲ್ಪಿಸಬೇಕು ಎಂಬುದು ಜನತೆಯ ಒತ್ತಾಯ.
ಪ್ರಯೋಗಾಲಯ ಮೂಲ ಸೌಕರ್ಯಗಳಿಲ್ಲದೆ ಹತ್ತಾರು ಕಿಲೋ ಮೀಟರ್ ದೂರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಿದೆ. ದಿನದ 24 ಗಂಟೆ ಚಿಕಿತ್ಸೆ ದೊರೆಯುವಂತೆ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕುಮಂಜುನಾಥ್ ಮಂಗಳವಾಡ
ಆಸ್ಪತ್ರೆಯ ಸಿಬ್ಬಂದಿಗಾಗಿ ನಿರ್ಮಿಸಿರುವ ವಸತಿಗೃಹ ಶಿಥಿಲಾವಸ್ಥೆಗೆ ತಲುಪಿವೆ. ಕುಡಿಯುವ ನೀರು ಶೌಚಾಲಯ ಇಲ್ಲದೆ ವಸತಿಗೃಹ ವಾಸಯೋಗ್ಯವಾಗಿಲ್ಲ. ಇವುಗಳ ದುರಸ್ತಿ ಮಾಡಿಸಿ ಸಿಬ್ಬಂದಿ ಇಲ್ಲಿಯೇ ವಾಸಿಸಲು ವ್ಯವಸ್ಥೆ ಮಾಡಬೇಕುಧನಂಜಯ ಮಂಗಳವಾಡ
ಔಷಧಿಗಳು ಇಲ್ಲದೆ ಸಮಸ್ಯೆಯಾಗುತ್ತಿದೆ. ಖಾಸಗಿ ಮಳಿಗೆಗಳಲ್ಲಿ ಔಷಧಿ ಖರೀದಿಸಬೇಕಿದೆ. ಸಂಬಂಧಿಸಿದವರು ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಕ್ಕೆ ಔಷಧಿ ಸರಬರಾಜು ಮಾಡಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸಬೇಕುಭಾನುಕಿರಣ್ ಮಂಗಳವಾಡ
ತುರ್ತು ವಾಹನ ಇಲ್ಲದೆ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಕಾಲಕ್ಕೆ ತುರ್ತು ವಾಹನ ಸಿಗದೆ ಸಾಕಷ್ಟು ಮಂದಿ ಜೀವಕಳೆದುಕೊಂಡಿದ್ದಾರೆ. ಆಸ್ಪತ್ರೆಗೆ ತಲುಪುವ ಮುನ್ನವೇ ಹೆರಿಗೆಯಾಗಿರುವ ನಿದರ್ಶನಗಳಿವೆಹನುಮಂತರಾಯಪ್ಪ ಮಂಗಳವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.