ADVERTISEMENT

ಹೊನ್ನವಳ್ಳಿ | ‘ಅಪ್ಪು’ ಪುತ್ಥಳಿ ಪ್ರತಿಷ್ಠಾಪನೆ, ತೆರವು: ಬಿಗುವಿನ ವಾತಾವರಣ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 5:26 IST
Last Updated 21 ಡಿಸೆಂಬರ್ 2024, 5:26 IST
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಅಧಿಕಾರಿಗಳು ಮತ್ತು ಪುನೀತ್‌ ಅಭಿಮಾನಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು
ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಅಧಿಕಾರಿಗಳು ಮತ್ತು ಪುನೀತ್‌ ಅಭಿಮಾನಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು   

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಗುರುವಾರ ರಾತ್ರಿ ಪ್ರತಿಷ್ಠಾಪಿಸಿದ್ದ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಪುತ್ಥಳಿಯನ್ನು ಶುಕ್ರವಾರ ಬೆಳಗಿನ ಜಾವ ಪೊಲೀಸರು ತೆರವುಗೊಳಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಪುತ್ಥಳಿ ಪ್ರತಿಷ್ಠಾಪನೆಗೆ ಅನುಮತಿ ಕೋರಿ ಡಿ. 18ರಂದು ‘ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ’ ವತಿಯಿಂದ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಅನುಮತಿ ಸಿಕ್ಕಿರಲಿಲ್ಲ. ಗುರುವಾರ ಮಧ್ಯರಾತ್ರಿ ಪುತ್ಥಳಿ ಅನಾವರಣಗೊಳಿಸಿದ್ದರು. ಬೆಳಗಿನ ಜಾವ ಪೂಜೆ ಮಾಡಲು ತೆರಳುವಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪುತ್ಥಳಿ ತೆರವುಗೊಳಿಸಿದ್ದಾರೆ. ಪುತ್ಥಳಿಯನ್ನು ಕೆಲ ಕಾಲ ಠಾಣೆಯಲ್ಲಿ ಇಟ್ಟುಕೊಂಡು ನಂತರ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಪಿ.ಶಿವನಂಜೇಗೌಡ ಅವರಿಗೆ ಹಸ್ತಾಂತರಿಸಿದರು.

‘ಪೊಲೀಸ್‌ ಠಾಣೆ ಪಕ್ಕದಲ್ಲಿ ಪುತ್ಥಳಿ ಅನಾವರಣಕ್ಕೆ ಅನುಮತಿ ನೀಡಿಲ್ಲ. ಮಂಡ್ಯ– ಹೂವಿನಹಡಗಲಿ ರಾಜ್ಯ ಹೆದ್ದಾರಿಯೂ ಪಕ್ಕದಲ್ಲೇ ಹಾದು ಹೋಗಿದ್ದು, ಇಲ್ಲಿ ಪುತ್ಥಳಿ ನಿರ್ಮಾಣಕ್ಕೆ‌ ಅವಕಾಶ ನೀಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲೂ ಇದಕ್ಕೆ ಅನುವು ಮಾಡಿಕೊಡುವುದಿಲ್ಲ’ ಎಂದು ಶಿವನಂಜೇಗೌಡ ಸ್ಪಷ್ಟಪಡಿಸಿದರು.

ADVERTISEMENT

ಪಂಚಾಯಿತಿ ಅಧಿಕಾರಿಗಳು ಮತ್ತು ಸಂಘಟನೆಯ ಪದಾಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೊಣವಿನಕೆರೆ, ಹೊನ್ನವಳ್ಳಿ ಠಾಣೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇನ್‌ಸ್ಪೆಕ್ಟರ್‌ ಸಿದ್ದರಾಮೇಶ್ವರ, ಹೊನ್ನವಳ್ಳಿ ಠಾಣೆಯ ಚಂದ್ರಕಾಂತ್, ತಾ.ಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶಿವಕುಮಾರ್ ಭೇಟಿ ನೀಡಿದ್ದರು.

ಡಿ. 22ರಂದು ಹೊನ್ನವಳ್ಳಿಯಲ್ಲಿ ಹಮ್ಮಿಕೊಂಡಿರುವ ‘ಕಲ್ಪತರು ನಾಡಿನ ಕನ್ನಡ ಹಬ್ಬ’ ಆಚರಣೆಗೆ ಅನುಮತಿ ನೀಡುವಂತೆ ‘ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆ’ ಪದಾಧಿಕಾರಿಗಳು ಮನವಿ ಮಾಡಿದರು. ‘ಇದಕ್ಕೂ ಅವಕಾಶ ನೀಡಲು ಆಗುವುದಿಲ್ಲ’ ಎಂದು ಪಿಡಿಒ ಹೇಳಿದ್ದಾರೆ.

ಪೊಲೀಸರು ತೆರವುಗೊಳಿಸಿದ ಪುತ್ಥಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.