ADVERTISEMENT

ಹೃದಯ ಬೆಸೆಯುವ ಧಾರ್ಮಿಕತೆ: ರಿಯಾಜ್‌ ರೋನ್‌

‘ಪ್ರವಾದಿ ಮುಹಮ್ಮದ್’ ಲೇಖನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 3:35 IST
Last Updated 15 ಸೆಪ್ಟೆಂಬರ್ 2024, 3:35 IST
ತುಮಕೂರಿನಲ್ಲಿ ಶನಿವಾರ ಶಾಂತಿ ಪ್ರಕಾಶನ ಹೊರ ತಂದಿರುವ ‘ಪ್ರವಾದಿ ಮುಹಮ್ಮದ್’ ಲೇಖನ ಸಂಕಲನ ಲೋಕಾರ್ಪಣೆಗೊಳಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಹಮೀದ್ ಉಮರಿ ಸಾಹಿಬ್, ಸಹಾಯಕ ಕಾರ್ಯದರ್ಶಿ ರಿಯಾಜ್‌ ರೋನ್‌, ಸ್ಥಾನೀಯ ಅಧ್ಯಕ್ಷ ಅಸಾದುಲ್ಲಾ ಖಾನ್‌ ಇತರರು ಹಾಜರಿದ್ದರು
ತುಮಕೂರಿನಲ್ಲಿ ಶನಿವಾರ ಶಾಂತಿ ಪ್ರಕಾಶನ ಹೊರ ತಂದಿರುವ ‘ಪ್ರವಾದಿ ಮುಹಮ್ಮದ್’ ಲೇಖನ ಸಂಕಲನ ಲೋಕಾರ್ಪಣೆಗೊಳಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಹಮೀದ್ ಉಮರಿ ಸಾಹಿಬ್, ಸಹಾಯಕ ಕಾರ್ಯದರ್ಶಿ ರಿಯಾಜ್‌ ರೋನ್‌, ಸ್ಥಾನೀಯ ಅಧ್ಯಕ್ಷ ಅಸಾದುಲ್ಲಾ ಖಾನ್‌ ಇತರರು ಹಾಜರಿದ್ದರು   

ತುಮಕೂರು: ಕಲುಷಿತ ಸಮಾಜ ತಿದ್ದಲು, ಕೆಡುಕು, ಅನ್ಯಾಯ ಮುಕ್ತವಾದ ಸಮಾಜ ಕಟ್ಟಲು ಧಾರ್ಮಿಕ ವಿಚಾರಗಳಿಂದ ಮಾತ್ರ ಸಾಧ್ಯ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ಸಹಾಯಕ ಕಾರ್ಯದರ್ಶಿ ರಿಯಾಜ್‌ ರೋನ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಜಮಾಅತೆ ಇಸ್ಲಾಮೀ ಹಿಂದ್‌ ವತಿಯಿಂದ ಹಮ್ಮಿಕೊಂಡಿದ್ದ ಶಾಂತಿ ಪ್ರಕಾಶನ ಹೊರ ತಂದಿರುವ ‘ಪ್ರವಾದಿ ಮುಹಮ್ಮದ್’ ಲೇಖನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಟ್ಟಡ, ಸೇತುವೆಗಳಿಂದ ಮನುಷ್ಯನ ಹೃದಯ ಜೋಡಿಸಲು ಸಾಧ್ಯವಿಲ್ಲ. ಧಾರ್ಮಿಕ ಚಿಂತನೆ, ಸಂದೇಶಗಳು ಎಲ್ಲರನ್ನು ಬೆಸೆಯುತ್ತವೆ. ಧಾರ್ಮಿಕ ಚಿಂತನೆ ವ್ಯಾಪಕವಾಗಿ ಹರಿಡಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ನಮ್ಮ ಧರ್ಮ, ಚಿಂತನೆ, ಆರಾಧನೆಗಳ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕು. ಹಬ್ಬ–ಆಚರಣೆಗಳ ಬಗ್ಗೆ ಮುಕ್ತ, ಆರೋಗ್ಯ ಪೂರ್ಣವಾದ ಚರ್ಚೆ ಏರ್ಪಡಿಸಿದರೆ ಜನರಲ್ಲಿ ಪೂರ್ವಗ್ರಹ, ಗೊಂದಲ, ಅಪನಂಬಿಕೆ ದೂರವಾಗುತ್ತದೆ ಎಂದರು.

ADVERTISEMENT

ಕೆಲವು ಪುಸ್ತಕಗಳಲ್ಲಿನ ವಿಚಾರಗಳು ಸಮಾಜವನ್ನು ಒಡೆದರೆ, ಇನ್ನೂ ಕೆಲವು ಪುಸ್ತಕಗಳು ಎಲ್ಲರ ಹೃದಯ ಬೆಸೆಯುತ್ತವೆ. ಶಾಂತಿ ಪ್ರಕಾಶನ ಮಾನವ ಸಮೂಹವನ್ನು ಪರಸ್ಪರ ಜೋಡಿಸುವಂತಹ ಪುಸ್ತಕಗಳನ್ನು ಪ್ರಕಟಿಸುತ್ತಿದೆ.‌ ಪ್ರೀತಿ, ಅನುಕಂಪ, ಸೌಹಾರ್ದ ಹುಟ್ಟು ಹಾಕುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪ್ರವಾದಿ ಮಹ್ಮದ್ ವಿಚಾರ, ಬದುಕು ತಿಳಿಸಲು ಸೆ. 22ರ ತನಕ ರಾಜ್ಯದಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಿಚಾರ ಗೋಷ್ಠಿ, ಸಮಾರಂಭ, ಪ್ರಬಂಧ ಸ್ಪರ್ಧೆಗಳ ಮೂಲಕ ಪ್ರವಾದಿ ಕುರಿತು ವಿಚಾರಗಳನ್ನು ವ್ಯಾಪಕಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಅನ್ಯ ಧರ್ಮೀಯರು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಮಹ್ಮದ್‌ ಅವರು ಎಲ್ಲರು ಉತ್ತಮ ಬದುಕು ಸಾಗಿಸಬೇಕು, ಪರಸ್ಪರ ಗೌರವಿಸಬೇಕು. ಅಹಿಂಸೆಯ ಹಾದಿಯಲ್ಲಿ ಸಾಗಬೇಕು, ಮಾನವೀಯತೆ ವಾದ ಒಪ್ಪಬೇಕು ಎಂಬ ಸಂದೇಶ ಸಾರಿದ್ದಾರೆ. ಪುಸ್ತಕದಲ್ಲಿ ಪ್ರವಾದಿ ಜೀವನ ಚರಿತ್ರೆ, ಕೆಲಸ, ಮನುಕುಲಕ್ಕೆ ಒಳಿತಾಗುವ ವಿಚಾರ ಉಲ್ಲೇಖಿಸಲಾಗಿದೆ. ಪುಸ್ತಕವನ್ನು ಶಾಲಾ–ಕಾಲೇಜಿನ ವಿದ್ಯಾರ್ಥಿಗಳಿಗೆ ತಲುಪಿಸಬೇಕು’ ಎಂದು ಸಲಹೆ ಮಾಡಿದರು.

ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಹಮೀದ್ ಉಮರಿ ಸಾಹಿಬ್, ಸ್ಥಾನೀಯ ಅಧ್ಯಕ್ಷ ಅಸಾದುಲ್ಲಾ ಖಾನ್‌ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.