ADVERTISEMENT

ತುಮಕೂರು | ವರಮಹಾಲಕ್ಷ್ಮಿ ಹಬ್ಬ: ಹೂ, ಹಣ್ಣು ದುಬಾರಿ; ಖರೀದಿ ಜೋರು

ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ಧತೆ; ಮಾರುಕಟ್ಟೆಯಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:23 IST
Last Updated 8 ಆಗಸ್ಟ್ 2025, 5:23 IST
ತುಮಕೂರಿನಲ್ಲಿ ಗುರುವಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಖರೀದಿ
ತುಮಕೂರಿನಲ್ಲಿ ಗುರುವಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಖರೀದಿ   

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಹಬ್ಬದ ಮುನ್ನ ದಿನವಾದ ಗುರುವಾರ ನಗರದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂತು. ಹೂವು, ಹಣ್ಣು ಬೆಲೆ ಗಗನ ಮುಟ್ಟಿದ್ದು, ಜನರು ಗೊಣಗುತ್ತಲೇ ಖರೀದಿ ನಡೆಸಿದರು.

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ದೃಶ್ಯ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಂಡು ಬಂತು. ಅಂತರಸನಹಳ್ಳಿ ಮಾರುಕಟ್ಟೆ, ಬಾಳನಕಟ್ಟೆಯ ಜೆ.ಸಿ.ರಸ್ತೆಯಲ್ಲಿ ಮಾರಾಟ– ಖರೀದಿ ಬಿರುಸು ಪಡೆದುಕೊಂಡಿತ್ತು.

ವರಮಹಾಲಕ್ಷ್ಮಿ ಪೂಜಿಸಲು ಪ್ರಮುಖವಾಗಿ ಬಳಸುವ ಹೂವು, ಹಣ್ಣುಗಳು ದುಬಾರಿಯಾಗಿದ್ದವು. ಸೇವಂತಿಗೆ ಹೂವು ಮಾರು ₹200–250, ಕನಕಾಂಬರ, ಕಾಕಡ ಮಾರು ₹150, ದುಂಡು ಮಲ್ಲಿಗೆ ₹300, ಚೆಂಡು ಹೂ ₹150, ಬಿಡಿ ಹೂವು ಕೆ.ಜಿ ₹400ರ ವರೆಗೂ ಏರಿಕೆಯಾಗಿತ್ತು. ಬಾಳೆಕಂದು ಜೋಡಿ ₹40 ದಾಟಿತ್ತು.

ADVERTISEMENT

ಆಷಾಢ ಮಾಸ ಮುಗಿದು ಶ್ರಾವಣ ಕಾಲಿಡುತ್ತಿದ್ದಂತೆ ದುಬಾರಿಯಾಗುತ್ತಲೇ ಸಾಗಿರುವ ಏಲಕ್ಕಿ ಬಾಳೆಹಣ್ಣು ಕೆ.ಜಿ ₹100–110 ದಾಟಿತ್ತು. ಸೇಬು ಕೆ.ಜಿ ₹180–200, ಮೂಸಂಬಿ ಕೆ.ಜಿ ₹100, ಕಿತ್ತಳೆ ಕೆ.ಜಿ ₹160–180, ದಾಳಿಂಬೆ ₹250, ದ್ರಾಕ್ಷಿ ಕೆ.ಜಿ ₹240–320 ವರೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಯಿತು.

ಅಂತರಸನಹಳ್ಳಿ ಮಾರುಕಟ್ಟೆಯಷ್ಟೇ ಅಲ್ಲದೆ ನಗರದ ಇತರ ಬಡಾವಣೆಗಳಲ್ಲೂ ಹೂವು, ಹಣ್ಣು ಮಾರಾಟ ಕಂಡು ಬಂತು. ಹೂವು, ಹಣ್ಣು, ಬಳೆ, ಬಾಳೆಕಂದು, ಮಾವಿನ ಎಲೆ, ತಾವರೆ ಹೂವು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಲಕ್ಷ್ಮಿ ವಿಗ್ರಹ, ಮೂರ್ತಿ, ಮುಖವಾಡ, ಮಾಂಗಲ್ಯಸರ, ಮತ್ತಿತರ ವಸ್ತುಗಳನ್ನು ಮಹಿಳೆಯರು ಖರೀದಿಸಿದರು.

ತುಮಕೂರಿನಲ್ಲಿ ಗುರುವಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಖರೀದಿ
ತುಮಕೂರಿನಲ್ಲಿ ಗುರುವಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಹಣ್ಣು ಖರೀದಿ
ತುಮಕೂರಿನಲ್ಲಿ ಗುರುವಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಖರೀದಿ

ಹಬ್ಬಕ್ಕೆ ಖರೀದಿ ಭರಾಟೆ

ತುರುವೇಕೆರೆ: ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಪಟ್ಟಣದ ತಾಲ್ಲೂಕು ಕಚೇರಿ ವೃತ್ತದ ಬಳಿ ಗುರುವಾರ ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿ ಭರಾಟೆ ಜೋರಾಗಿತ್ತು.

ಇಲ್ಲಿನ ಬಾಣಸಂದ್ರ ಮತ್ತು ವೈಟಿ ವೃತ್ತದಲ್ಲಿ ಮತ್ತು ದಬ್ಬೇಘಟ್ಟ ರಸ್ತೆಗಳಲ್ಲಿ ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿದ್ದರು. ಬಾಳೆ ಹಣ್ಣು ಕೆ.ಜಿ ₹80, ಸೇವಂತಿಗೆ, ಕನಕಾಂಬರ ಸೇರಿದಂತೆ ವಿವಿಧ ಬಗೆಯ ಹೂವುಗಳು ಒಂದು ಮಾರಿಗೆ ₹120ರಿಂದ ₹150ಕ್ಕೆ ಮಾರಾಟವಾಯಿತು. ಸೇಬು, ಕಿತ್ತಲೆ, ದಾಕ್ಷಿ, ಕೆಜಿಗೆ ₹150 ವರೆಗೆ ಮಾರಾಟವಾಯಿತು.

ನಿಂಬೆ, ವಿಳ್ಳೆದೆಲೆ, ತಾವರೆ, ಬಾಳೆ ಕಂದು, ತುಳಸಿಹಾರಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಬೆಳ್ಳಿ, ದಿನಸಿ, ಬಟ್ಟೆ, ಒಡವೆ ಅಂಗಡಿಗಳ ಬಳಿ ಜನಸಂದಣಿ ಹೆಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.