ADVERTISEMENT

ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್‌ಗೆ ಟೆಂಡರ್‌: ಕೇಂದ್ರ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 5:55 IST
Last Updated 9 ಫೆಬ್ರುವರಿ 2025, 5:55 IST
ತುಮಕೂರಿನಲ್ಲಿ ಶನಿವಾರ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶನಿವಾರ ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಇತರರು ಉಪಸ್ಥಿತರಿದ್ದರು   

ತುಮಕೂರು: ನಗರದ ಹೊರ ವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್‌ ರಸ್ತೆ ಕಾಮಗಾರಿಗೆ ಶೀಘ್ರವೇ ಟೆಂಡರ್‌ ಕರೆಯಲಾಗುವುದು ಎಂದು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

₹2,600 ಕೋಟಿಯಲ್ಲಿ 44 ಕಿ.ಮೀ ಉದ್ದದ ಬೈಪಾಸ್‌ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 48ರ ನಂದಿಹಳ್ಳಿಯಿಂದ ಮಲ್ಲಸಂದ್ರ ಮಾರ್ಗವಾಗಿ ವಸಂತನರಸಾಪುರದ ವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ. ಮೊದಲ ಹಂತದಲ್ಲಿ 26 ಕಿ.ಮೀ ರಸ್ತೆ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಈ ಬಾರಿ ಕೇಂದ್ರದ ಬಜೆಟ್‌ನಲ್ಲಿ 50 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದ್ದು, ಅದರಲ್ಲಿ ಜಿಲ್ಲೆಯ ನಾಲ್ಕು ಪ್ರವಾಸಿ ತಾಣಗಳು ಸೇರ್ಪಡೆಯಾಗಿವೆ. ಕೊರಟಗೆರೆಯ ಸಿದ್ಧರಬೆಟ್ಟ, ಮಧುಗಿರಿಯ ಏಕಶಿಲಾ ಬೆಟ್ಟ, ತಾಲ್ಲೂಕಿನ ದೇವರಾಯನದುರ್ಗ, ತಿಪಟೂರಿನ ಅರಳಗುಪ್ಪೆ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಜಲಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ರಾಷ್ಟ್ರದ 15 ಕೋಟಿ ಮನೆಗೆ ಶುದ್ಧ ಕುಡಿಯುವ ನೀರು ಕೊಡಲಾಗಿದೆ. 2028ರ ವರಗೆ ಯೋಜನೆ ವಿಸ್ತರಿಸಲಾಗಿದ್ದು, ಇದಕ್ಕಾಗಿ ₹4.28 ಲಕ್ಷ ಕೋಟಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ವಂದೇಭಾರತ್‌ ಹತ್ತು ರೈಲುಗಳು ಸಂಚರಿಸುತ್ತಿದ್ದು, ಮತ್ತೆರಡು ರೈಲು ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ನೆಲಮಂಗಲ- ತುಮಕೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ವೇಗ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ₹617 ಕೋಟಿ ವೆಚ್ಚದಲ್ಲಿ ಕೆ.ಬಿ.ಕ್ರಾಸ್‌– ತುರುವೇಕೆರೆ– ಮಾಯಸಂದ್ರ– ನೆಲ್ಲಿಗೆರೆ ಭಾಗದ 42 ಕಿ.ಮೀ ದ್ವಿಪಥ ರಸ್ತೆ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಶಿರಾ– ಬಡವನಹಳ್ಳಿ– ಮಧುಗಿರಿ– ಬೈರೇನಹಳ್ಳಿ ಭಾಗದ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.

2014ರಿಂದ ರಾಜ್ಯದಲ್ಲಿ 3,233 ಕಿ.ಮೀ ರೈಲ್ವೆ ಮಾರ್ಗ ವಿದ್ಯುದೀಕರಣ ಮಾಡಲಾಗಿದೆ. ಇದಕ್ಕಾಗಿ ₹3,840 ಕೋಟಿ ವೆಚ್ಚಮಾಡಲಾಗಿದೆ. ಹತ್ತು ವರ್ಷದಲ್ಲಿ ರೈಲ್ವೆ ಯೋಜನೆಗಾಗಿ ₹47 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಬಾಕಿ ಕಾಮಗಾರಿಗಳನ್ನು ಮಾರ್ಚ್‌ 30ರ ಒಳಗೆ ಆರಂಭಿಸಲಾಗುವುದು. ಮೂರು ವರ್ಷದಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌ ಹಾಜರಿದ್ದರು.

ಕವಚ ಯೋಜನೆಯಡಿ ರಾಜ್ಯದ 1500 ಕಿ.ಮೀ ರೈಲ್ವೆ ಮಾರ್ಗದಲ್ಲಿ ಆಟೋಮೆಟಿಕ್‌ ರೈಲ್ವೆ ಸಿಗ್ನಲ್‌ ಅಳವಡಿಸಲಾಗುತ್ತಿದೆ
ವಿ.ಸೋಮಣ್ಣ ಕೇಂದ್ರ ಸಚಿವ
ಆಸಕ್ತಿ ತೋರದ ಯುವಕರು
ರೈಲ್ವೆ ಹುದ್ದೆಗಳ ನೇಮಕಾತಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕಳೆದ ಬಾರಿ 23 ಸಾವಿರ ಹುದ್ದೆಗಳ ಭರ್ತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯದ ಶೇ 2ರಷ್ಟು ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿಲ್ಲ. ಯುವ ಸಮೂಹ ಆಸಕ್ತಿ ತೋರುತ್ತಿಲ್ಲ. ವಿ.ಸೋಮಣ್ಣ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.