
ತುಮಕೂರು: ತುಮಕೂರು– ದಾವಣಗೆರೆ ಹಾಗೂ ತುಮಕೂರು– ರಾಯದುರ್ಗ ರೈಲ್ವೆ ಮಾರ್ಗದ ಕಾಮಗಾರಿ ಚುರುಕು ಪಡೆದುಕೊಂಡಿದ್ದು, ತಾಲ್ಲೂಕಿನ ತಿಮ್ಮರಾಜನಹಳ್ಳಿ ಮಾರ್ಗದಲ್ಲಿ 25 ಕಿ.ಮೀ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ತಾಲ್ಲೂಕಿನ ಊರುಕೆರೆ– ತಿಮ್ಮರಾಜನಹಳ್ಳಿ ಮಾರ್ಗದ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯನ್ನು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗುರುವಾರ ಪರಿಶೀಲನೆ ನಡೆಸಿದರು.
ತಿಮ್ಮರಾಜನಹಳ್ಳಿ ರೈಲ್ವೆ ಜಂಕ್ಷನ್‌ನಿಂದ ಬೈಪಾಸ್ ರಸ್ತೆವರೆಗೂ ಸಚಿವರು ಟ್ರ್ಯಾಲಿಯಲ್ಲಿ ತೆರಳಿ ಕಾಮಗಾರಿ ವೀಕ್ಷಿಸಿದರು. ಮಾರ್ಗ ಮಧ್ಯದ ರೈಲು ನಿಲ್ದಾಣ, ನೂತನ ರಸ್ತೆ, ಕೆಳ ಹಾಗೂ ಮೇಲು ಸೇತುವೆಗಳ ನಿರ್ಮಾಣ ಕಾಮಗಾರಿ ಪರಿಶೀಲಸಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ತಿಮ್ಮರಾಜನಹಳ್ಳಿ ವರೆಗಿನ 13 ಕಿ.ಮೀ ಸೇರಿದಂತೆ 25 ಕಿ.ಮೀ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ತಜ್ಞರು ಶೀಘ್ರವೇ ಪರಿಶೀಲನೆ ನಡೆಸಲಿದ್ದು, ಸಂಚಾರಕ್ಕೆ ಅವಕಾಶ ನೀಡಲಿದ್ದಾರೆ. ಎಲ್ಲ ಪ್ರಕ್ರಿಯೆ ಮುಗಿದ ನಂತರ ಸರಕು ಸಾಗಣೆ ರೈಲುಗಳ ಸಂಚಾರ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.
ತುಮಕೂರು– ರಾಯದುರ್ಗ ರೈಲ್ವೆ ಯೋಜನೆಗೆ ಬೇಕಾದ ಭೂಸ್ವಾಧೀನ ಪೂರ್ಣಗೊಂಡಿದ್ದು, ಕಾಮಗಾರಿ ನಡೆಯುತ್ತಿದೆ. ತುಮಕೂರು– ಚಿತ್ರದುರ್ಗ– ದಾವಣಗೆರೆ ರೈಲ್ವೆ ಮಾರ್ಗಕ್ಕೆ ಇನ್ನೂ 133 ಎಕರೆ ಭೂಮಿಯನ್ನು ರೈಲ್ವೆ ಇಲಾಖೆಗೆ ನೀಡಬೇಕಾಗಿದೆ. ಶೀಘ್ರವೇ ಈ ಭೂಮಿಯನ್ನು ಕೊಡಲಾಗುತ್ತದೆ. 2027ರ ಅಂತ್ಯಕ್ಕೆ ಕಾಮಗಾರಿ ಮುಗಿಸಿ, ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. 2028ಕ್ಕೆ ವಿಧಾನಸಭೆ ಚುನಾವಣೆ ಬರಲಿದ್ದು, ಅಷ್ಟರಲ್ಲಿ ಎಲ್ಲ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ವಿವರಿಸಿದರು.
ಪ್ರಸ್ತುತ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 47 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಪ್ರಮುಖವಾಗಿ 31 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 3,840 ಕಿ.ಮೀ ಮಾರ್ಗದ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.
ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್, ನೈರುತ್ಯ ರೈಲ್ವೆ ನಿರ್ಮಾಣ ವಿಭಾಗದ ಎಂಜಿನಿಯರ್ ಪ್ರಸಾದ್, ಪ್ರದೀಪ್ ಪುರಿ, ದಿಶಾ ಸಮಿತಿ ಸದಸ್ಯರಾದ ಎಸ್.ಶಿವಪ್ರಸಾದ್, ವೈ.ಎಚ್.ಹುಚ್ಚಯ್ಯ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.