ADVERTISEMENT

ಮಧುಗಿರಿ ಕ್ಷೇತ್ರದಲ್ಲೇ ಕಾಂಗ್ರೆಸ್ ಶೂನ್ಯ ಮಾಡ್ತೇವೆ: ಕೆ.ಎನ್.ರಾಜಣ್ಣ ಎಚ್ಚರಿಕೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಉಚ್ಚಾಟನೆಗೆ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 14:10 IST
Last Updated 21 ಏಪ್ರಿಲ್ 2019, 14:10 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡದೇ ವಿರುದ್ಧವಾಗಿ ಕೆಲಸ ಮಾಡಿದ ಕಾರಣ ನೀಡಿ ಕೆಪಿಸಿಸಿಯು ಮಧುಗಿರಿ ನಗರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಉಚ್ಚಾಟನೆಗೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೆಂಡಾಮಂಡಲವಾಗಿದ್ದಾರೆ. ಮಧುಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನೇ ಶೂನ್ಯ ಮಾಡಿಬಿಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಣ್ಣ, ‘ನಮ್ಮ ಕ್ಷೇತ್ರದ ಇಬ್ಬರೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ವಿರುದ್ಧ, ಮೈತ್ರಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ ಎಂಬುದಕ್ಕೆ ಏನು ಆಧಾರವಿದೆ. ಯಾವ ಪುರಾವೆ ಇದೆ?’ ಎಂದು ತರಾಟೆಗೆ ತೆಗೆದುಕೊಂಡರು.

ಕೆಪಿಸಿಸಿ ಕ್ರಮ ಸರಿಯಾಗಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಳೆಸಿದವರು ಈ ಬ್ಲಾಕ್ ಕಾಂಗ್ರೆಸ್‌ ನಂಥಹ ಅಧ್ಯಕ್ಷರು, ಕಾರ್ಯಕರ್ತರೇ. ಅವರ ಶ್ರಮ, ನಿಷ್ಠೆ ಗಮನಿಸದೇ ನಿಷ್ಠಾವಂತರನ್ನು ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಈ ಆದೇಶ ಹಿಂದಕ್ಕೆ ಪಡೆಯದಿದ್ದರೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಮಧುಗಿರಿಯಲ್ಲಿ ಕಾಂಗ್ರೆಸ್ ಶೂನ್ಯ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಬೆಂಬಲಿಗರ ಸಭೆಯಲ್ಲಿ ಉಚ್ಚಾಟಿತರಿಗೆ ಧೈರ್ಯ

ಮಧುಗಿರಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ರಾಜಗೋಪಾಲ್, ಮಧುಗಿರಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ಅವರನ್ನು ಶುಕ್ರವಾರ ಕೆಪಿಸಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ ಕ್ರಮ ಬಗ್ಗೆ ಬೆಂಬಲಿಗರ ಸಭೆಯನ್ನು ರಾಜಣ್ಣ ಅವರು ತಮ್ಮ ಮನೆಯಲ್ಲಿ ಶನಿವಾರ ನಡೆಸಿದ್ದರು.

ಕಾಂಗ್ರೆಸ್‌ನಲ್ಲಿ ಅಮಾನತು ಮಾಡುವುದೇನೂ ಹೊಸದಲ್ಲ. ಆದರೆ, ನನ್ನ ನಡೆ ನಿಷ್ಠಾವಂತ ಕಾರ್ಯಕರ್ತರ ಪರ ಇರುತ್ತದೆ. ಅವರ ಬೆನ್ನಿಗೆ ನಾನು ಯಾವತ್ತೂ ಇರುತ್ತೇನೆ. ಧೈರ್ಯಗೆಡಬೇಕಿಲ್ಲ. ಇಷ್ಟಕ್ಕೂ ಉಚ್ಚಾಟನೆ ಮಾಡುವಂತಹ ತಪ್ಪನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾಡಿಲ್ಲ ಎಂದು ಧೈರ್ಯ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.