ADVERTISEMENT

ಒಳಮೀಸಲಾತಿ; ಸಿದ್ದಯ್ಯಗೆ ಸ್ಪಷ್ಟತೆ

ಕೆ.ಬಿ.ಸಿದ್ದಯ್ಯ ಕುರಿತ ‘ಬಕಾಲ ಮುನಿಯ’ ನೆನಪು ಕಾರ್ಯಕ್ರಮದಲ್ಲಿ ಎಲ್.ಹನುಮಂತಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:36 IST
Last Updated 18 ಅಕ್ಟೋಬರ್ 2020, 16:36 IST
ಬಕಾಲ ಮುನಿಯ ನೆನಪು ಕಾರ್ಯಕ್ರಮದಲ್ಲಿ ‘ಒಳಮೀಸಲಾತಿ ಕುರಿತು ಬಕಾಲಮುನಿ ಕೆಬಿಎಸ್ ಕೊನೆಯ ನುಡಿ’ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು
ಬಕಾಲ ಮುನಿಯ ನೆನಪು ಕಾರ್ಯಕ್ರಮದಲ್ಲಿ ‘ಒಳಮೀಸಲಾತಿ ಕುರಿತು ಬಕಾಲಮುನಿ ಕೆಬಿಎಸ್ ಕೊನೆಯ ನುಡಿ’ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು   

ತುಮಕೂರು: ಕವಿ ಕೆ.ಬಿ.ಸಿದ್ದಯ್ಯ ಅವರಿಗೆ ಒಳಮೀಸಲಾತಿಯ ಬಗ್ಗೆ ಸ್ಪಷ್ಟತೆ ಇತ್ತು. ಅದಕ್ಕೆ ಬದ್ದರಾಗಿದ್ದರು. ಅದೇ ಕಾರಣಕ್ಕಾಗಿಯೇ ಒಳಮೀಸಲಾತಿ ಜಾರಿ ಆಗಬೇಕು ಎಂದು ಪ್ರತಿಪಾದಿಸುತ್ತಿದ್ದರು. ಇದು ಇಡೀ ರಾಜ್ಯದ ಚಳವಳಿಗೆ ಆದರ್ಶವಾಗಿದೆ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕೆ.ಬಿ.ಗೆಳೆಯರ ಬಳಗವು ಹಮ್ಮಿಕೊಂಡಿದ್ದ ‘ಬಕಾಲ ಮುನಿಯ ನೆನಪು’ ಕಾರ್ಯಕ್ರಮದಲ್ಲಿ ‘ಒಳಮೀಸಲಾತಿಯ ಕುರಿತು ಬಕಾಲಮುನಿ ಕೆಬಿಎಸ್ ಕೊನೆಯ ನುಡಿ’ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.

ಕೆಬಿ ಅವರ ಮಾತುಗಳನ್ನು ಸಂಸದ ವಿ.ಶ್ರೀನಿವಾಸ ಪ್ರಸಾದ್ ಕೇಳಿಸಿಕೊಂಡಿದ್ದರೆ ನಿಜವಾಗಿಯೂ ಒಳಮೀಸಲಾತಿ ಬೇಕು ಎಂದು ಹೇಳುತ್ತಿದ್ದರು. ಒಳಮೀಸಲಾತಿ ಅಗತ್ಯವನ್ನು ನಿಖರವಾಗಿ ಹೇಳುತ್ತಿದ್ದರು ಎಂದು ಸ್ಮರಿಸಿದರು.

ADVERTISEMENT

‘ಕೆ.ಬಿ.ಸಿದ್ದಯ್ಯ ರಾಜಕೀಯ ಅಧಿಕಾರದ ಹಿಂದೆ ಬಿದ್ದವರಲ್ಲ. ಒಮ್ಮೆ ನಮ್ಮಿಬ್ಬರ ಹೆಸರು ವಿಧಾನಪರಿಷತ್ ಆಯ್ಕೆ ಪಟ್ಟಿಯಲ್ಲಿ ಇದ್ದಾಗ ಕೆ.ಬಿ ಅವರು ನನ್ನ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದರು’ ಎಂದು ನೆನಪಿಸಿಕೊಂಡರು.

ಕೆ.ಬಿ.ಸಿದ್ದಯ್ಯ ಅವರ ಸಾಹಿತ್ಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಿ ಅಲ್ಲಿ ಮಂಡನೆ ಆಗುವ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತಂದರೆ ಉತ್ತಮವಾದ ಕೆಲಸವಾಗುತ್ತದೆ ಎಂದು ಸಲಹೆ ನೀಡಿದರು.

ಸಾಹಿತಿ ನಟರಾಜ್ ಬೂದಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕಿ ಡಾ.ಅರುಂಧತಿ, ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಉದ್ಯಮಿ ಡಿ.ಟಿ.ವೆಂಕಟೇಶ್, ಆರ್.ಜಿ.ಹಳ್ಳಿ ನಾಗರಾಜ್, ಕೊಟ್ಟಶಂಕರ್, ಚೈತ್ರಾ, ಪಲ್ಲವಿ ಉಪಸ್ಥಿತರಿದ್ದರು. ವಿರೂಪಾಕ್ಷ ಡ್ಯಾಗೇರಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.

ಇದಕ್ಕೂ ಮೊದಲು ಕವಿಗೋಷ್ಠಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.