
ತುಮಕೂರು: ನದಿಗಳ ಜೋಡಣೆ ಬಗ್ಗೆ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ, ಒಂದು ನಿರ್ಧಾರಕ್ಕೆ ಬರುವಂತೆ ಮಾಜಿ ಸಂಸದ ಜಿ.ಎಸ್.ಬಸವರಾಜು ಇಲ್ಲಿ ಸೋಮವಾರ ಒತ್ತಾಯಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ನದಿ ಜೋಡಣೆಗೆ ಪ್ರಯತ್ನ ಆರಂಭಿಸಿದೆ. ಅದರ ಭಾಗವಾಗಿ ರಾಜ್ಯದಲ್ಲೂ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನದಿ ಜೋಡಣೆ ವಿಚಾರವಾಗಿ ಜಿಲ್ಲೆಗಳ ಮಧ್ಯೆ ಹೋರಾಟಗಳು ಆರಂಭವಾಗಿವೆ. ಎಲ್ಲ ವರ್ಗದವರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು, ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಬೇಕು. ಪ್ರತಿಯೊಂದು ನದಿ ಪಾತ್ರದ ನೀರನ್ನು ಸಂಬಂಧಿಸಿದ ಪ್ರದೇಶಗಳಿಗೆ ನಿಗದಿಪಡಿಸಬೇಕು. ಸಮಗ್ರ ನೀರಿನ ಬಳಕೆಯ ಕಾನೂನು ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೋದಾವರಿ- ಕಾವೇರಿ- ಬೇಡ್ತಿ- ವರದಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಹ ಮುಂದಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಗೋದಾವರಿ- ಕಾವೇರಿ ನದಿ ಜೋಡಣೆಯಿಂದಾಗಿ ತೆಲಂಗಾಣ 43.64 ಟಿಎಂಸಿ ಅಡಿಗಳು, ಆಂಧ್ರಪ್ರದೇಶ 45.27 ಟಿಎಂಸಿ, ತಮಿಳುನಾಡು 40.82 ಟಿಎಂಸಿ, ಕರ್ನಾಟಕ 15.89 ಟಿಎಂಸಿ, ಪುದುಚೇರಿ 2.30 ಟಿಎಂಸಿ ಅಡಿಗಳಷ್ಟು ಹೆಚ್ಚುವರಿ ನೀರು ಲಭ್ಯವಾಗಲಿದೆ. ಬೇಡ್ತಿ- ವರದಾ (ಹೀರೇವಡ್ಡಟ್ಟಿ) ನದಿ ಜೋಡಣೆ ಯೋಜನೆಯಿಂದಾಗಿ 18.50 ಟಿಎಂಸಿ ಅಡಿ ನೀರು ಸಿಗಲಿದೆ ಎಂದು ಮಾಹಿತಿ ನೀಡಿದರು.
ಅಘನಾಶಿನಿ– ವೇದಾವತಿ (ವಾಣಿವಿಲಾಸ) ನದಿ ಜೋಡಣೆಯಿಂದ ಸುಮಾರು 35.10 ಟಿಎಂಸಿ ಅಡಿ ನೀರು ಲಭ್ಯವಾಗುತ್ತದೆ. ಇದರಿಂದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಕುಂದರನಹಳ್ಳಿ ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.