ADVERTISEMENT

ಗುಡಿಸಲು ಹಾಕಿಕೊಳ್ಳಲು ಮುಂದಾದ ಜನ

ಅಕ್ರಮ ಎಂದು ತೆರವುಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 14:18 IST
Last Updated 29 ಆಗಸ್ಟ್ 2019, 14:18 IST
ಶಿರಾದ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಸುತ್ತಮುತ್ತಲಿನ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳಲು ಪಾಯ ತೆಗೆದಿರುವುದು
ಶಿರಾದ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಸುತ್ತಮುತ್ತಲಿನ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಳ್ಳಲು ಪಾಯ ತೆಗೆದಿರುವುದು   

ಶಿರಾ: ನಗರದ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಬಳಿಯಿರುವ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಳ್ಳಲು ಮುಂದಾದವರನ್ನು ಗುರುವಾರ ಪೊಲೀಸರು ತೆರವುಗೊಳಿಸಿದ್ದಾರೆ.

ಆಶ್ರಯ ಯೋಜನೆಯಡಿ 20 ವರ್ಷಗಳ ಹಿಂದೆ ಶಾಸಕ ಬಿ.ಸತ್ಯನಾರಾಯಣ ಮೊದಲ ಬಾರಿಗೆ ಶಾಸಕರಾಗಿದ್ದ ಸಮಯದಲ್ಲಿ ಸರ್ವೆ ನಂ. 67ರಲ್ಲಿ ನಿವೇಶನಗಳನ್ನು ನೀಡಲಾಗಿತ್ತು. ಆದರೆ, ಇದರ ಪಕ್ಕದಲ್ಲೇ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಪ್ರಾರಂಭಿಸಿದ ಕಾರಣ ಇಲ್ಲಿ ಯಾರು ಮನೆಗಳನ್ನು ನಿರ್ಮಿಸಿಕೊಂಡಿಲ್ಲ. ಆದ್ದರಿಂದ ನಿವೇಶನಗಳನ್ನು ರದ್ದು ಪಡಿಸಲಾಗಿತ್ತು. ಬೇರೆ ಕಡೆ ನಿವೇಶನ ನೀಡುವಂತೆ ಹಲವಾರು ಮಂದಿ ಪ್ರಯತ್ನ ನಡೆಸುತ್ತಿದ್ದರು ಸಹ ಯಾವುದೇ ಯಶಸ್ಸು ದೊರೆತಿರಲಿಲ್ಲ. ಈಗ ಮತ್ತೆ ಬಿ.ಸತ್ಯನಾರಾಯಣ ಶಾಸಕರಾಗಿ ಆಯ್ಕೆಯಾದ ನಂತರ ಅದೇ ನಿವೇಶನಗಳನ್ನು ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.

ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಬಳಿ ಕೆಲ ದಿನಗಳಿಂದ ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಳ್ಳುತ್ತಿರುವ ವಿಷಯ ತಿಳಿದು ಸತ್ಯನಾರಾಯಣ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ‘ಈ ಸ್ಥಳ ದುರ್ವಾಸನೆಯಿಂದ ಕೂಡಿದ್ದು, ವಾಸ ಮಾಡಲು ಯೋಗ್ಯವಾಗಿಲ್ಲ. ಆದ್ದರಿಂದ ಬೇರೆ ಕಡೆ ನಿವೇಶನಗಳನ್ನು ನೀಡುವಾಗ ಅರ್ಹರಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು.

ADVERTISEMENT

ಶಾಸಕರು ಭೇಟಿ ನೀಡಿದ್ದ ವಿಷಯ ತಿಳಿದು ಗುರುವಾರ ಸಾವಿರಾರು ಮಂದಿ, ‘ನಮಗೂ ನಿವೇಶನ ಬೇಕು’ ಎಂದು ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಳ್ಳಲು ಮುಂದಾದು. ಇನ್ನೂ ಕೆಲವರು ಪಾಯವನ್ನು ಸಹ ತೆಗೆದಿದ್ದಾರೆ.

ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಕಾಂಪೌಂಡು ಗೊಡೆಗೆ ಹೊಂದಿಕೊಂಡಂತೆ ಸಹ ಕೆಲವರು ಗುಡಿಸಲು ಹಾಕಿಕೊಳ್ಳಲು ಮುಂದಾಗಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ಹಾಕಿಕೊಳ್ಳಬಾರದು. ಜೊತೆಗೆ ಇಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಇರುವುದರಿಂದ ಸುತ್ತಮುತ್ತ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ಜನರನ್ನು ತೆರವುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.