ADVERTISEMENT

ಶಿರಾ | ಟೈರ್ ಇಲ್ಲದೆ ಮೂಲೆ ಸೇರಿದ ಆಂಬುಲೆನ್ಸ್‌

ಒಂದೂವರೆ ತಿಂಗಳಾದರು ಬದಲಾಯಿಸಿಲ್ಲ ಟೈರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:40 IST
Last Updated 5 ಸೆಪ್ಟೆಂಬರ್ 2025, 5:40 IST
ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲೆ ಸೇರಿರುವ ಆಂಬುಲೆನ್ಸ್‌
ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲೆ ಸೇರಿರುವ ಆಂಬುಲೆನ್ಸ್‌   

ಶಿರಾ: ನಗರದ ತಾಲ್ಲೂಕು ಆರೋಗ್ಯ ಕೇಂದ್ರದ ಆವರಣದಲ್ಲಿ ಒಂದೂವರೆ ತಿಂಗಳಿನಿಂದ ‘108’ ಆಂಬುಲೆನ್ಸ್‌ ಟೈರ್ ಇಲ್ಲದ ಕಾರಣ ಮೂಲೆ ಸೇರಿದ್ದು, ಬಡ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಸರ್ಕಾರ ಆರೋಗ್ಯ ಕವಚ ಯೋಜನೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ‘108’ ಆಂಬುಲೆನ್ಸ್‌ ಯೋಜನೆ ರೂಪಿಸಿದ್ದು, ಅಗತ್ಯ ಇರುವ ಯಾರು ಬೇಕಾದರೂ ‘108’ ಸಂಖ್ಯೆಗೆ ಕರೆ ಮಾಡಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಆದರೆ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳಿನಿಂದ ಟೈರ್‌ ಇಲ್ಲ ಎಂದು ಆಂಬುಲೆನ್ಸ್‌ ಅನ್ನು ಮೂಲೆಯಲ್ಲಿ ನಿಲ್ಲಿಸಿದ್ದಾರೆ.

ADVERTISEMENT

ಆಂಬುಲೆನ್ಸ್‌ಗೆ ಒಂದು ಟೈರು ಹಾಕಿಸುವ ಶಕ್ತಿ ಸರ್ಕಾರಕ್ಕೆ‌ ಇಲ್ಲವೇ? ಒಂದು ವೇಳೆ ಸರ್ಕಾರ ಟೈರ್‌ ಹಾಕಿಸಲು ಹಿಂದೇಟು ಹಾಕಿದರೆ ಆಸ್ಪತ್ರೆ ಅಥವಾ ದಾನಿಗಳ ಸಹಕಾರದಿಂದ ಟೈರ್ ಹಾಕಿಸಿದ್ದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು.

ಖಾಸಗಿಯವರ ದಂಧೆ: ನಗರದಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗಳ ದರ್ಬಾರ್ ಹೆಚ್ಚಾಗಿದ್ದು, ಇವರ ಪ್ರಭಾವಕ್ಕೆ‌ ಮಣಿದು ಆಸ್ಪತ್ರೆ ಆಡಳಿತ ಮಂಡಳಿಯವರು ಆಂಬ್ಯುಲೆನ್ಸ್ ಅನ್ನು ಮೂಲೆಯಲ್ಲಿ ನಿಲ್ಲಿಸಿದ್ದಾರೆ ಎಂದು ರೋಗಿಗಳು ದೂರುತ್ತಾರೆ.

ಸರ್ಕಾರಿ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗಳು ನಿಂತಿದ್ದು, ಅನಿವಾರ್ಯವಾಗಿ ಜನರು ಹೆಚ್ಚು ಹಣ ತೆತ್ತು ಇವುಗಳಲ್ಲಿ ಹೋಗಬೇಕಿದೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಇವರ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು ರೋಗಿಗಳು ಸಂಕಷ್ಟ ಪಡುವಂತಾಗಿದೆ ಎಂದೂ ಆರೋಪಿಸಿದ್ದಾರೆ.

ಮೇಲಧಿಕಾರಿಗಳು ಎಚ್ಚೆತ್ತು ಆಂಬುಲೆನ್ಸ್‌ಗೆ ಹೊಸ ಟೈರ್ ಹಾಕಿಸುವ ಮೂಲಕ ರೋಗಿಗಳ ನೋವಿಗೆ ಸ್ಪಂದಿಸಬೇಕು ಎಂದು ರೋಗಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.