ADVERTISEMENT

ಶಿರಾ ಜೆಡಿಎಸ್ ಭದ್ರಕೋಟೆ: ಪ್ರಜ್ವಲ್‌ ರೇವಣ್ಣ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:43 IST
Last Updated 18 ಅಕ್ಟೋಬರ್ 2020, 16:43 IST
ಶಿರಾ ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಜೆಡಿಎಸ್ ಪ್ರಚಾರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಬಿ.ಸಿ.ಗೌರಿಶಂಕರ್ ಭಾಗಿಯಾಗಿದ್ದರು
ಶಿರಾ ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಜೆಡಿಎಸ್ ಪ್ರಚಾರದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಬಿ.ಸಿ.ಗೌರಿಶಂಕರ್ ಭಾಗಿಯಾಗಿದ್ದರು   

ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಕೆಲವು ನಾಯಕರು ಜೆಡಿಎಸ್ ತೊರೆದು ಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರ ಪಡೆಯೇ ಇದೆಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಶಿರಾ ಮೊದಲಿನಿಂದಲೂ ಜೆಡಿಎಸ್‌ ಭದ್ರಕೋಟೆಯಾಗಿದೆ. ಉಪ ಚುನಾವಣೆಯಲ್ಲೂ ಸಹ ಜೆಡಿಎಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರ ಜೆಡಿಎಸ್ ಪರ ಪ್ರಚಾರ ನಡೆಸಿದ ಅವರು, ‘ಇದು ಕೇವಲ ನಮ್ಮ ಚುನಾವಣೆಯಲ್ಲ ಕಾರ್ಯಕರ್ತರ ಸ್ವಾಭಿಮಾನದ ಚುನಾವಣೆ’ ಎಂದರು.

ADVERTISEMENT

‘ಹುಲಿಕುಂಟೆ ಹೋಬಳಿಯ ಉಸ್ತುವಾರಿ ನಾನು ವಹಿಸಿಕೊಂಡಿದ್ದು, ಈ ಭಾಗದ ಮುಖಂಡರ ಜತೆ ಚರ್ಚಿಸಿ ಮುಂದಿನ ಕಾರ್ಯತಂತ್ರ, ಯೋಜನೆಗಳನ್ನು ರೂಪಿಸುತ್ತೇನೆ’ ಎಂದು ಪ್ರಜ್ವಲ್‌ ತಿಳಿಸಿದರು.

ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ‘ಬೇರೆ ಪಕ್ಷಗಳ ಸುಳ್ಳು ಭರವಸೆಗಳಿಗೆ ಕ್ಷೇತ್ರದ ಜನ ಮರಳಾಗುವುದಿಲ್ಲ.ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರ ಅಭಿವೃದ್ದಿ ಕೆಲಸಗಳು ಜನರ ಕಣ್ಣ ಮುಂದಿವೆ ಎಂದರು.

‘ಜೆಡಿಎಸ್ ಅಭ್ಯರ್ಥಿ ಗೆದ್ದರೂ, ಸೋತರೂ ನಿಮ್ಮ ಜೊತೆಯಲ್ಲಿ ಇರುತ್ತಾರೆ. ಆದರೆ ಬೇರೆಯವರು ಗೆದ್ದರೂ ಬೆಂಗಳೂರು, ಸೋತರೂ ಬೆಂಗಳೂರಿನಲ್ಲಿರುತ್ತಾರೆ’ ಎಂದರು.

ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಅವರ ಪುತ್ರ ಬಿ.ಎಸ್.ಸತ್ಯಪ್ರಕಾಶ್ ಮಾತನಾಡಿ, ‘ನಮ್ಮ ತಂದೆಯ ಮೇಲೆ ‌ನಂಬಿಕೆ ಇಟ್ಟು 5 ವರ್ಷ ಅಧಿಕಾರ ನೀಡಿದ್ದೀರಿ. ನಮ್ಮ ತಂದೆಯ ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ತನ್ನ ತಾಯಿಯನ್ನು ಹರಿಸುವಂತೆ ಕೋರಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ, ‘ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಕೊರತೆ ಇಲ್ಲ. ಕ್ಷೇತ್ರದ ಜನತೆ ಜೆಡಿಎಸ್ ಪರವಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಸತ್ಯನಾರಾಯಣ ಅವರು ಕೈಗೊಂಡ ಜನಪರ ಕಾರ್ಯಕ್ರಮಗಳು ನಮಗೆ ಶ್ರೀರಕ್ಷೆಯಾಗಿವೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ರಾಮಕೃಷ್ಣ, ಸಿ.ಆರ್.ಉಮೇಶ್, ಎಚ್.ಎಸ್.ಮೂಡಲಗಿರಿಯಪ್ಪ, ಟಿ.ಡಿ.ಮಲ್ಲೇಶ್, ಹೊನ್ನೇನಹಳ್ಳಿ ನಾಗರಾಜು, ಸೀಗಲಹಳ್ಳಿ ವೀರೇಂದ್ರ, ಉದಯಶಂಕರ್, ಕೋಟೆ ಮಹದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.