ADVERTISEMENT

ಶಿರಾದಲ್ಲಿ ಮರೀಚಿಕೆಯಾದ ಸಿಗ್ನಲ್ ಲೈಟ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:35 IST
Last Updated 16 ಫೆಬ್ರುವರಿ 2026, 6:35 IST
ಶಿರಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಎಲ್ಲೆಂದರಲ್ಲಿ ವಾಹನ ನಿಲುಗಡೆ 
ಶಿರಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಎಲ್ಲೆಂದರಲ್ಲಿ ವಾಹನ ನಿಲುಗಡೆ    

ಶಿರಾ: ನಗರದಲ್ಲಿ ಒಂದೇ ಒಂದು ಕಡೆಯು ವ್ಯವಸ್ಥಿತ ಸಿಗ್ನಲ್ ವ್ಯವಸ್ಥೆ ಇಲ್ಲದಂತಾಗಿದೆ. 

ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ವುತ್ತಿದ್ದು ರಸ್ತೆಗಳ ಎರಡು ಬದಿಯನ್ನು ಬೀದಿ ಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದು ಪಾದಚಾರಿಗಳು ಸಹ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿರುವ ನಗರಸಭೆ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ ಎಂದು ಜನರು ದೂರುತ್ತಿದ್ದಾರೆ.

ನಗರದ ಅಂಬೇಡ್ಕರ್ ವೃತ್ತ ಹಾಗೂ ದರ್ಗಾ ವೃತ್ತದಲ್ಲಿ 14 ವರ್ಷಗಳ ಹಿಂದೆ ತಲಾ ₹10 ಲಕ್ಷ ವೆಚ್ಚದಲ್ಲಿ ಸಿಗ್ನಲ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದು ಕಾರ್ಯನಿರ್ವಹಿಸಿದ್ದು ಬೆರಳೆಣಿಕೆಯಷ್ಟು ದಿನ ಮಾತ್ರ. ಹೆಸರಿಗೆ ಮಾತ್ರ ಸಿಗ್ನಲ್ ವ್ಯವಸ್ಥೆ ಮಾಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಜೇಬು ತುಂಬಿಸಿಕೊಂಡಿದ್ದು ಬಿಟ್ಟರೆ ಜನರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ನಾಲ್ಕು ವರ್ಷಗಳ ಹಿಂದೆಯೇ ಎರಡು ಕಡೆ ಸಿಗ್ನಲ್ ದೀಪಗಳನ್ನು ಕಿತ್ತು ಹಾಕಿ ಕಾರಂಜಿ ನಿರ್ಮಿಸಿದ್ದಾರೆ.

ADVERTISEMENT

ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರಂಜಿ ತೆರವುಗೊಳಿಸಿ ಸಿಗ್ನಲ್ ವ್ಯವಸ್ಥೆ ಮಾಡುವಂತೆ ಪೊಲೀಸ್ ಇಲಾಖೆ ವರದಿ ನೀಡಿದ್ದು ಈ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪರ ವಿರೋಧದ ಚರ್ಚೆಗಳು ನಡೆದು ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದೆ ನನೆಗುದಿಗೆ ಬೀಳುವಂತಾಗಿದೆ. ಇಲ್ಲಿ ಸದಾ ವಾಹನ ದಟ್ಟಣೆಯಿಂದ ಕೂಡಿದ್ದು ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರು ಬೇಕಾಬಿಟ್ಟಿ ಸಂಚರಿಸುತ್ತಿದ್ದು ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ.

ನಗರದಲ್ಲಿ ಹಲವು ಶಾಲಾ ಕಾಲೇಜುಗಳಿವೆ. ಪ್ರತಿನಿತ್ಯ ವಿದ್ಯಾರ್ಥಿಗಳು, ರೈತರು ಸೇರಿದಂತೆ ಸಾವಿರಾರು ಜನರು ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಬರುತ್ತಾರೆ. ಸಾವಿರಾರು ಲಾರಿ, ಟ್ರ್ಯಾಕ್ಟರ್, ಖಾಸಗಿ ಬಸ್ ಸಂಚರಿಸುತ್ತವೆ. ಜನ ನಡೆದಾಡಲು ಪಾದಚಾರಿ ಮಾರ್ಗಗಳೇ ಇಲ್ಲ. ಪಾದಾಚಾರಿ ರಸ್ತೆಗಳು ಬೀದಿ ಬದಿ ಅಂಗಡಿಗಳು ಹಾಗೂ ದ್ವಿಚಕ್ರವಾಹನ ಪಾರ್ಕಿಂಗ್ ಜಾಗಗಳಾಗಿವೆ. ಜನ ಅನಿವಾರ್ಯವಾಗಿ ರಸ್ತೆಯಲ್ಲೆ ನಡೆದುಕೊಂಡು ಹೋಗಬೇಕಾಗಿದೆ. ಇದರಿಂದಾಗಿ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲ.

ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಪ್ರವಾಸಿ ಮಂದಿರ ವೃತ್ತ, ಬುಕ್ಕಾಪಟ್ಟಣ ವೃತ್ತ, ಹಳೆ ಪುರಸಭೆ ರಸ್ತೆ, ರಾಘವೇಂದ್ರ ಸ್ವಾಮಿ ದೇವಸ್ಥಾನ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ, ಮಧುಗಿರಿ ರಸ್ತೆ, ಹಳೆ ಆಸ್ಪತ್ರೆ ರಸ್ತೆ ಸೇರಿದಂತೆ ಬಹುತೇಕ‌ ಕಡೆ ವಾಹನ ದಟ್ಟಣೆ ಹೆಚ್ಚಾಗಿದ್ದು, ಫುಟ್‌ಪಾತ್‌ನಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುವುದರಿಂದ ಹೆಚ್ಚಿನ‌ ತೊಂದರೆಯಾಗುತ್ತಿದೆ.

ನಗರದ ಬಹುತೇಕ ಕಡೆ ಸಂಚಾರ ದಟ್ಟಣೆಗೆ ಬೀದಿ ಬದಿ ಹೋಟಲ್‌ಗಳು ಕಾರಣವಾಗಿದೆ. ಪಾದಚಾರಿ ರಸ್ತೆಯಲ್ಲಿ ಹೋಟೆಲ್‌ಗಳನ್ನು ಇಟ್ಟುಕೊಂಡಿದ್ದು, ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ಹೆಚ್ಚಿನ ತೊಂದರೆಯಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ.

ಸಂಚಾರಿ ಪೊಲೀಸ್ ಠಾಣೆ: ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಉತ್ತಮಪಡಿಸಲು ಸಂಚಾರ ಪೊಲೀಸ್ ಠಾಣೆಯ ಸ್ಥಾಪಿಸುವಂತೆ ಬಹು ದಿನಗಳಿಂದ ಬೇಡಿಕೆ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಶಾಸಕ ಟಿ.ಬಿ.ಜಯಚಂದ್ರ ಹಿಂದೆ ಸಚಿವರಾಗಿದ್ದ ಸಮಯದಲ್ಲಿ ಸಿಗ್ಮಲ್ ಲೈಟ್ ಆಳವಡಿಸಲಾಗಿತ್ತು. ಅದರೆ ಇದರಿಂದ‌ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದು ಈ ಬಾರಿಯಾದರೂ ಸುಗಮ ಸಂಚಾರಕ್ಕೆ ಒತ್ತು ನೀಡುವರೆ ಎನ್ನುವುದು ಜನರ ಪ್ರಶ್ನೆ.

ನಗರದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ನಗರೋತ್ಥಾನ ಯೋಜನೆಯಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಲಾಗುವುದು.
ರುದ್ರೇಶ್, ನಗರಸಭೆ ಪೌರಾಯುಕ್ತ
ಶಿರಾದಲ್ಲಿ ಸಂಚಾರಿ ಪೊಲೀಸ್‌ ಠಾಣೆ ಅತ್ಯವಶ್ಯವಾಗಿದ್ದು ತಕ್ಷಣ ಪ್ರಾರಂಭಿಸಬೇಕು. ನಗರದಲ್ಲಿ ಅಸ್ತವ್ಯಸ್ತವಾಗಿರುವ ಸಂಚಾರ ವ್ಯವಸ್ಥೆ ಸರಿಪಡಿಸಲು ಸಂಚಾರಿ ಪರಿಣಿತರನ್ನು ಕರೆಸಿ ಅವರಿಂದ ಸೂಕ್ತ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕು.
ಎಚ್.ಗುರುಮೂರ್ತಿಗೌಡ, ವಕೀಲರ ಸಂಘದ ಅಧ್ಯಕ್ಷ
ಸಂಚಾರ ವ್ಯವಸ್ಥೆ ಸುಗಮಗೊಳಿಸಲು ನಗರಸಭೆ ಸಂಪೂರ್ಣ ವಿಫಲವಾಗಿದೆ. ನಗರಸಭೆ ಜನರಿಗೆ ಸೌಲಭ್ಯ ನೀಡುವುದಕ್ಕಿಂತ ತಮ್ಮ ವೈಯಕ್ತಿಕ ಲಾಭಕ್ಕೆ‌ ಒತ್ತು ನೀಡುತ್ತಿದ್ದಾರೆ. ಕಣ್ಣು ಮುಂದೆಯೇ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ.
ರವಿಶಂಕರ್, ನಗರಸಭೆ ಮಾಜಿ ಸದಸ್ಯ
ಸಿಬ್ಬಂದಿ ಕೊರತೆ ನಡುವೆಯೂ ಪೊಲೀಸರು ಸಂಚಾರ ನಿಯಂತ್ರಣ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ನಗರಸಭೆ ಪೊಲೀಸ್ ಇಲಾಖೆ ಒಟ್ಟಿಗೆ ಶ್ರಮಿಸುವುದರ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ.
ಬರಗೂರು ಶಿವಕುಮಾರ್, ಶಿರಾ
ಶಿರಾದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಪಕ್ಕ ರಸ್ತೆಯಲ್ಲಿ ನಡೆಯುವ ಹೂವಿನ ಮಾರುಕಟ್ಟೆ
ಹಳೆ ರಾಷ್ಟ್ರೀಯ ಹೆದ್ದಾರಿ– 4ರಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.