ADVERTISEMENT

ತಿಪಟೂರು: ಶ್ವಾನಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಕಿತ್ಸೆ ನಡೆಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:00 IST
Last Updated 10 ಜನವರಿ 2026, 6:00 IST
ತಿಪಟೂರಿನಲ್ಲಿ ಬೀದಿ ನಾಯಿಗಳು
ತಿಪಟೂರಿನಲ್ಲಿ ಬೀದಿ ನಾಯಿಗಳು   

ತಿಪಟೂರು: ತಾಲ್ಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಾಯಿ ಕಡಿತ ಹಾಗೂ ಅಪಘಾತಗಳಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. 

ನಗರದ ಪ್ರಮುಖ ರಸ್ತೆ, ಬಡಾವಣೆ ಹಾಗೂ ವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳು ಗುಂಪಾಗಿ ಸಂಚರಿಸುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ದ್ವಿಚಕ್ರ ವಾಹನ ಸವಾರರನ್ನು ನಾಯಿಗಳು ಓಡಿಸಿಕೊಂಡು ಬಂದ ಪರಿಣಾಮ ಬಿದ್ದಿರುವ ನಿದರ್ಶನಗಳಿವೆ. 

ನಾಯಿ ಕಡಿತದಿಂದ ಗಾಯಗೊಂಡವರಿಗೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಆರ್ಥಿಕ ಹೊರೆ ಕೂಡ ಹೆಚ್ಚುತ್ತಿದೆ. ಸಂಜೆ ಹಾಗೂ ರಾತ್ರಿ ರಸ್ತೆಗಳಲ್ಲಿ ಓಡಾಡುವುದೇ ಅಪಾಯಕಾರಿ ಎಂಬಂತಾಗಿದೆ. 

ADVERTISEMENT

ಇತ್ತೀಚಿನ ವರದಿಗಳ ಪ್ರಕಾರ ನಗರ ಪ್ರದೇಶದಲ್ಲಿ ಎರಡು ಸಾವಿರ, ಗ್ರಾಮಾಂತರ ಪ್ರದೇಶದಲ್ಲಿ ಆರು ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ಇವೆ. ಆದರೆ ನಾಯಿಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಜನರು ದೂರಿದ್ದಾರೆ.

ನಗರಸಭೆ, ತಾಲ್ಲೂಕು ಪಂಚಾಯಿತಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಬೀದಿ ನಾಯಿಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ, ಲಸಿಕೆ ಹಾಗೂ ನಿರ್ದಿಷ್ಟ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

‘ನಗರದ ಗೊರಗೊಂಡನಹಳ್ಳಿಯ 30 ಮತ್ತು 31ನೇ ವಾರ್ಡ್‌ ನಾಯಿಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ನಗರಸಭೆ ಪೌರಯುಕ್ತರಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಗರಸಭೆ ಒಳಕ್ಕೆ ನಾಯಿಗಳನ್ನು ತಂದು ಬಿಡಬೇಕಾಗುತ್ತದೆ’ ಎಂದು ಸುದರ್ಶನ್ ಎಚ್ಚರಿಸಿದರು.

‘ನಮ್ಮ ಊರಿನಲ್ಲಿ ಮೂರು ನಾಲ್ಕು ತಿಂಗಳಲ್ಲಿ ಹದಿನೈದು ಜನರಿಗೆ ನಾಯಿ ಕಚ್ಚಿವೆ. ನಾಯಿಗಳ ನಿಯಂತ್ರಣಕ್ಕೆ ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕಿದೆ’ ಎನ್ನುತ್ತಾರೆ ತಿಮ್ಲಾಪುರದ ದೇವರಾಜ್.

‘ನಗರಸಭೆ ಈವರೆಗೆ ಬೀದಿ ನಾಯಿಗಳ ಹಿಡಿಯುವಲ್ಲಿ ಯಾವುದೇ ಪ್ರಾಮಾಣಿಕ ಕಾರ್ಯಕ್ರಮಗಳನ್ನು ಮಾಡಿಲ್ಲ. 2030ರ ಹೊತ್ತಿಗೆ ರೇಬಿಸ್‌ ಮುಕ್ತ ಭಾರತ ಮಾಡಬೇಕು ಎನ್ನುವ ಹೇಳಿಕೆ ಕೇವಲ ಆಶ್ವಾಸನೆಗೆ ಸೀಮಿತವಾಗುತ್ತಿದೆ’ ಎನ್ನುತ್ತಾರೆ ಅನುಷ್ ಶಿವಯ್ಯ.

‘ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಅವುಗಳನ್ನು ತಿನ್ನಲು ಬೀದಿನಾಯಿಗಳು ಸೇರುತ್ತವೆ. ನಗರಸಭೆ ಕಸ ವಿಂಗಡನೆಯಲ್ಲಿ ಸಾರ್ವಜನಿಕರಿಗೆ ಅರಿವು ಜೊತೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸ್ವಚ್ಛತೆ ಕಾಪಾಡಬೇಕು. ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿದ ನಾಯಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡಬೇಕು’ ಎಂದು ನಗರ ನಿವಾಸಿ ರಾಜೇಶ್‌ ಒತ್ತಾಯಿಸಿದರು.

ತಿಪಟೂರಿನಲ್ಲಿ ಬೀದಿ ನಾಯಿಗಳು
ನಾಯಿ ಕಡಿತಕ್ಕೆ ತುತ್ತಾದವರೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು. ತಾಲ್ಲೂಕು ಆಸ್ಪತ್ರೆಯಲ್ಲಿ ಹುಚ್ಚುನಾಯಿ ಕಡಿತಕ್ಕೆ ₹70 ಸಾವಿರ ಮೌಲ್ಯದ ಔಷಧಿ ಉಚಿತವಾಗಿ ಲಭ್ಯವಿದೆ.
ಚನ್ನಕೇಶವ್ ತಾಲ್ಲೂಕು ಆರೋಗ್ಯ ಅಧಿಕಾರಿ
ಈಗಾಗಲೇ ಪಿಡಿಒಗಳಿಗೆ ಸೂಚನೆ ನೀಡಿದ್ದು ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಕಡಿತ ಸಾವು ಸಂಭವಿಸಿದಾಗ ಎಬಿಸಿ ಯೋಜನೆಗಾಗಿ ತಾ.ಪಂ ಗ್ರಾ.ಪಂ ಯೋಜನೆಗಳಲ್ಲಿ ಶೇ 2ರಷ್ಟು ಹಣ ವಿನಿಯೋಗಿಸಲಾಗುತ್ತಿದೆ.
ಎಚ್. ಎಂ. ಸುದರ್ಶನ್ ತಾ.ಪಂ ಇಒ
ಶ್ವಾನಗೃಹ ನಿರ್ಮಾಣಕ್ಕೆ ಟೆಂಡರ್ ನ್ಯಾಯಾಲಯದ ಆದೇಶದಂತೆ ಬೀದಿನಾಯಿಗಳ ಹಾವಳಿ ತಡೆಗೆ ನಾಯಿಗಳ ಸರ್ವೆ ಮಾಡಲಾಗಿದೆ. ₹50 ಲಕ್ಷದ ವೆಚ್ಚದಲ್ಲಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ಬೀದಿನಾಯಿಗಳ ಶ್ವಾನಗೃಹ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನಾಯಿ ಕಡಿತಕ್ಕೆ ಒಳಗಾದವರು ನಗರಸಭೆಗೆ ಅರ್ಜಿ ಸಲ್ಲಿಸಿದರೆ ₹5 ಸಾವಿರ ಪರಿಹಾರ ನೀಡಲಾಗುವುದು. ಈವರೆಗೂ ಒಂದು ಅರ್ಜಿ ಮಾತ್ರ ಸಲ್ಲಿಕೆಯಾಗಿದ್ದು ಪರಿಶೀಲನೆ ನಡೆಯುತ್ತಿದೆ.
ವಿಶ್ವೇಶ್ವರ ಬದರಗಡೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.