ADVERTISEMENT

ಪಠ್ಯ ಪರಿಷ್ಕರಣೆ ವಿವಾದ: ಟಿಪ್ಪು ಕನ್ನಡದವರಾ? ಎಂದು ಪ್ರಶ್ನಿಸಿದ ಸಚಿವ ಅಶೋಕ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 5:54 IST
Last Updated 19 ಜೂನ್ 2022, 5:54 IST
ಕಂದಾಯ ಸಚಿವ ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ್    

ತುಮಕೂರು: ಬೆಂಗಳೂರು, ಮೈಸೂರು ಅಂದ ತಕ್ಷಣ ಟಿಪ್ಪುವಿನ ಬಗ್ಗೆ ಹೇಳುತ್ತಾರೆ. ಟಿಪ್ಪು ಕನ್ನಡದವರಾ? ಅವರದ್ದು ಪರ್ಶಿಯನ್, ಉರ್ದು ಭಾಷೆ. ಅವರ ಕತ್ತಿಯ ಮೇಲೆಯೂ ಉರ್ದುವಿನಲ್ಲಿ ಬರೆದಿದ್ದರು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ತುರುವೆಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪು ಎಂದೂ ಕನ್ನಡವನ್ನು ಒಪ್ಪಿಕೊಂಡಿಲ್ಲ. ಲಕ್ಷಾಂತರ ಜನರನ್ನು ಮತಾಂತರ ಮಾಡಿದ್ದರು. ಅವರನ್ನು ವೈಭವೀಕರಿಸಲಾಗಿತ್ತು. ಈಗ ಮೊದಲ ಬಾರಿಗೆ ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಬಗ್ಗೆ ಸೇರಿಸಲಾಗಿದೆ ಎಂದರು.

ಕಾಮಾಲೆ ಕಣ್ಣಿಗೆ ಎಲ್ಲ ಹಳದಿಯಾಗಿಯೇ ಕಾಣವುದು. ಕಾಮಾಲೆ ಕಣ್ಣು, ಹಳದಿ ಕನ್ನಡಕ ಬಿಟ್ಟು, ಸರಿಯಾದ ಬಿಳಿ ಕನ್ನಡಕ ಹಾಕಿಕೊಳ್ಳಿ. ಎಲ್ಲ ಸತ್ಯ ಕಾಣುತ್ತದೆ ಎಂದು ಕುಟುಕಿದರು.

ADVERTISEMENT

ಡಿ.ಕೆ.ಶಿವಕುಮಾರ್ ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಪಠ್ಯಪುಸ್ತಕದ ಬಗ್ಗೆ ಯಾವುದೇ ಹೇಳಿಕೆ ನೀಡುವ ಮುನ್ನ ಪರಿಷ್ಕೃತ ಪಠ್ಯಪುಸ್ತಕ‌ ಓದಬೇಕು. ಪಠ್ಯಪುಸ್ತಕ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುವುದನ್ನು ತಿಳಿದುಕೊಳ್ಳಲಿ ಎಂದರು.

ಸರ್ಕಾರ‌ ಏನೇ ಮಾಡಿದರು ತಪ್ಪು ಹುಡುಕುತ್ತಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ‌ಕೇವಲ ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಾರೆ ಎಂದೂ ಹೇಳಿದರು.

ಕುವೆಂಪು ವಿಚಾರವನ್ನು ದೊಡ್ಡ ಸದ್ದು ಮಾಡುತ್ತಿದ್ದಾರೆ. ಕುವೆಂಪು ಅವರ ವಿಚಾರವುಳ್ಳ ಪಠ್ಯಕ್ಕೆ ಕತ್ತರಿ ಹಾಕಿದ್ದೇ ಸಿದ್ದರಾಮಯ್ಯ ಸರ್ಕಾರ. ಆಗ ಇದರ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ. ಈಗ ಬಿ.ಸಿ. ನಾಗೇಶ್ ಸಚಿವರಾದ ನಂತರ ಕುವೆಂಪು ಪಠ್ಯಕ್ಕೆ ಮತ್ತಷ್ಟು ಸೇರಿಸಲಾಗಿದೆ. ಇದರ ಬಗ್ಗೆ ಯಾರೂ ಮಾತಾಡಲಿಲ್ಲ ಎಂದರು.

ಶಾಸಕ ಮಸಾಲೆ ಜಯರಾಂ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.