ADVERTISEMENT

PV Web Exclusive: ಜಮೀನಿಗೆ ಸಿಗದ ದಾರಿ; ಪಂಚಾಯ್ತಿಗೆ ತಡೆ!

ಕೆ.ಜೆ.ಮರಿಯಪ್ಪ
Published 16 ಡಿಸೆಂಬರ್ 2020, 11:00 IST
Last Updated 16 ಡಿಸೆಂಬರ್ 2020, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ದಾರಿ ಇರುವುದಿಲ್ಲ. ಇನ್ನೊಬ್ಬರ ಜಮೀನಿನ ಮೂಲಕವೇ ತಮ್ಮ ಜಮೀನಿಗೆ ಹೋಗಬೇಕಾಗುತ್ತದೆ. ಈ ಸಮಸ್ಯೆಯನ್ನೇ ಪಂಚಾಯಿತಿ ಚುನಾವಣೆಯಲ್ಲಿ ಎದುರಾಳಿಯನ್ನು ಮಣಿಸಲು ಅಸ್ತ್ರ ಮಾಡಿಕೊಳ್ಳಲಾಗುತ್ತಿದೆ!

‘ಚುನಾವಣೆಯಲ್ಲಿ ಸ್ಪರ್ಧಿಸಿದರೆ ಹೊಲದ ಮೇಲೆ ಹೋಗಲು ದಾರಿ ಬಿಡುವುದಿಲ್ಲ. ಮುಂದೆ ಹೇಗೆ ನಮ್ಮ ಜಮೀನು ದಾಟಿಕೊಂಡು ಹೋಗುತ್ತೀರಿ? ಆ ಮೇಲೆ ನೋಡಿಕೊಳ್ಳುತ್ತೇವೆ’ ಮೊದಲಾದ ರೀತಿಯಲ್ಲಿ ಬೆದರಿಕೆ ಹಾಕಲಾಗುತ್ತಿದೆ.

ಜಮೀನಿನ ದಾರಿ ವಿಚಾರವನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವುದು, ಇಲ್ಲವೆ ನಾಮಪತ್ರ ವಾಪಸ್ ತೆಗೆಸುವಂತೆ ಮಾಡಲಾಗುತ್ತಿದೆ. ತಮಗೆ ಬೇಕಾದವರು, ಸಂಬಂಧಿಗಳು, ಆಪ್ತರಾಗಿದ್ದವರ ಜಮೀನಿನ ಮೇಲೆ ನಿತ್ಯವೂ ಸಂಚರಿಸುತ್ತಿದ್ದವರು ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿದರೆ ಅಂತಹವರಿಗೆ ಪರೋಕ್ಷ ಎಚ್ಚರಿಕೆ ಕೊಡಿಸಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ.

ADVERTISEMENT

ತುಮಕೂರು ತಾಲ್ಲೂಕಿನ ಕೊಂತಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ದೇವಲಾಪುರ ಗ್ರಾಮದಿಂದ ಸ್ಪರ್ಧಿಸಿದವರಿಗೆ ಇದೇ ರೀತಿಯ ‘ದಾರಿ’ ತೋರಿಸಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ. ಈ ವಿಚಾರ ಹಳ್ಳಿಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಗೆಲುವಿಗೆ ಏನೆಲ್ಲ ತಂತ್ರ ರೂಪಿಸಲಾಗುತ್ತಿದೆ ಎಂಬ ಮಾತುಗಳು ಜನರ ಬಾಯಲ್ಲಿ ಹರಿದಾಡುತ್ತಿವೆ.

ಡಾಬಾ, ಹೋಟೆಲ್‌ಗೆ ಸುಗ್ಗಿ: ಹೆದ್ದಾರಿ ಬದಿಯ ಡಾಬಾಗಳು, ಮಾಂಸಹಾರಿ ಹೋಟೆಲ್‌ಗಳು ಈಗ ರಾಜಕೀಯ ಚಟುವಟಿಗಳಿಗೆ ಬಳಕೆಯಾಗುತ್ತಿವೆ. ಸಾಕಷ್ಟು ಕಡೆಗಳಲ್ಲಿ ನಿತ್ಯವೂ ಬಿರಿಯಾನಿ ಊಟ ಕೊಡಿಸಲಾಗುತ್ತಿದೆ. ಯಾವುದಾದರೊಂದು ಡಾಬಾ, ಹೋಟೆಲ್ ಗೊತ್ತುಪಡಿಸಿ ಮಾಂಸದ ಊಟ ಸಿದ್ಧಪಡಿಸಿ ತಂದು ಹಳ್ಳಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಇಲ್ಲಿ ಊಟ ಮಾಡದವರಿಗೆ ಹೋಟೆಲ್‌ಗೆ ಕಳುಹಿಸಲಾಗುತ್ತದೆ. ಸಂಜೆಯಾಗುತ್ತಿದ್ದಂತೆ ಮದ್ಯದ ಪಾರ್ಟಿ ಜೋರಾಗುತ್ತದೆ. ಜಿದ್ದಾಜಿದ್ದಿ, ಪ್ರತಿಷ್ಠೆ ಏರ್ಪಟ್ಟಿರುವ ಕಡೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ತಾಲ್ಲೂಕಿನ ಹೆಬ್ಬೂರು ಗ್ರಾಮದ ಯುವಕರೊಬ್ಬರು ತಿಳಿಸಿದರು.

ಪಕ್ಷವೇ ಬೇಕು: ಹಿಂದಿನ ಚುನಾವಣೆಗಳಲ್ಲಿ ಕೆಲವು ಕಡೆಗಳಲ್ಲಿ ರಾಜಕೀಯ ಪಕ್ಷದ ಬೆಂಬಲಿಗರು ಎಂದು ಹೇಳಿಕೊಂಡು ಸ್ಪರ್ಧಿಸಿ ಮತ ಕೇಳುತ್ತಿದ್ದರು. ಆದರೆ ಈ ಬಾರಿ ಬಹುತೇಕ ಪಂಚಾಯಿತಿಗಳಲ್ಲಿ ಪಕ್ಷದ ಬೆಂಬಲದ ಮೇಲೆ ಸ್ಪರ್ಧಿಸಿರುವುದು ಕಂಡುಬರುತ್ತಿದೆ. ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ನಡೆಸಿದರೆ ಮಾತ್ರ ‘ನೆರವು’ ನೀಡುವುದಾಗಿ ರಾಜಕೀಯ ಪಕ್ಷಗಳ ಮುಖಂಡರು ಷರತ್ತು ಹಾಕುತಿದ್ದಾರೆ. ಹಾಗಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಬೆಂಬಲಿಗರು ಎಂದು ಹೇಳಿಕೊಂಡೇ ಸ್ಪರ್ಧಿಸಿದ್ದು, ಪಕ್ಷದ ಹೆಸರಿನಲ್ಲೇ ಪ್ರಚಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.