ADVERTISEMENT

ತಿಪಟೂರು | ಸಾಲುಗಟ್ಟಿ ನಿಂತ ವಾಹನ: ರೈತರು, ಅಧಿಕಾರಿಗಳ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:02 IST
Last Updated 1 ಮಾರ್ಚ್ 2026, 6:02 IST
ತಿಪಟೂರು ಎಪಿಎಂಸಿ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದ ರಾಗಿ ಚೀಲ ತುಂಬಿದ ವಾಹನಗಳು
ತಿಪಟೂರು ಎಪಿಎಂಸಿ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದ ರಾಗಿ ಚೀಲ ತುಂಬಿದ ವಾಹನಗಳು   

ತಿಪಟೂರು: ನಗರದ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಜೇಷ್ಠತಾ ಪಟ್ಟಿ ಅನುಸರಿಸದೆ ರೈತರು ರಾಗಿ ತರುತ್ತಿದ್ದು ಈ ಬಗ್ಗೆ ರೈತರು ಹಾಗೂ ಅಧಿಕಾರಿಗಳ ನಡುವೆ ಶನಿವಾರ ವಾಗ್ವಾದ ನಡೆಯಿತು. 

ಸಮಸ್ಯೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಷಡಕ್ಷರಿ ರೈತರು, ಅಧಿಕಾರಿಗಳ ಅಹವಾಲು ಆಲಿಸಿದರು.

ನಂತರ ಮಾತನಾಡಿದ ಷಡಕ್ಷರಿ, ಯಾರೇ ಬಂದರೂ ಜೇಷ್ಠತೆ ಹೊರತುಪಡಿಸಿ ರಾಗಿ ಖರೀದಿ ಮಾಡಬಾರದು. ಕೇಂದ್ರಕ್ಕೆ ಪೊಲೀಸ್ ಭದ್ರತೆ ಬೇಕಿದ್ದರೆ ನಿಯೋಜಿಸಲಾಗುವುದು. ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕು. ಜೇಷ್ಠತಾ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

ರಾಗಿ ಖರೀದಿ ಅಧಿಕಾರಿ ರುದ್ರಪ್ಪ ಮಾತನಾಡಿ, ಜೇಷ್ಠತಾ ಪಟ್ಟಿಯನ್ನು ಪ್ರತಿ ಮೂರು ದಿನಕ್ಕೊಮ್ಮೆ ಪ್ರಕಟಿಸಲಾಗುತ್ತಿದೆ. ಅದರ ಪ್ರಕಾರವೇ ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ಆದರೆ ಎಲ್ಲ ರೈತರು ರಾಗಿ ತೆಗೆದುಕೊಂಡು ಬಂದು ಸಾಲಗಟ್ಟಿ ನಿಂತಿದ್ದಾರೆ. ಕೇಂದ್ರದಲ್ಲಿ ಪ್ರತಿನಿತ್ಯ ನಾಲ್ಕರಿಂದ ಐದು ಸಾವಿರ ಕ್ವಿಂಟಲ್ ರಾಗಿ ಖರೀದಿ ಮಾಡಲಾಗುತ್ತಿದೆ ಎಂದರು.

ರೈತರು ಮಾತನಾಡಿ, ಎರಡು ಮೂರು ದಿನಗಳ ಹಿಂದೆ ಜೇಷ್ಠತಾ ಪಟ್ಟಿ ಅನುಸರಿಸದೆ ರಾಗಿ ಖರೀದಿ ಮಾಡಲಾಗಿದೆ. ಅದನ್ನು ಅನುಸರಿಸಿ ನಾವು ರಾಗಿ ತಂದಿದ್ದು, ವಾಪಸ್‌ ಮನೆಗೆ ಹಿಂತಿರುಗಿದರೆ ಒಂದು ವಾಹನಕ್ಕೆ ₹5 ಸಾವಿರ ಖರ್ಚು ಬರುತ್ತದೆ. ಮೂರ್ನಾಲ್ಕು ದಿನಗಳಿಂದ ಕಾಯುತ್ತಿದ್ದೇವೆ. ಆದ್ದರಿಂದ ಖರೀದಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇಂದು ನಿಮ್ಮ ರಾಗಿ ಖರೀದಿ ಮಾಡಿದರೆ ನಾಳೆ ಬೇರೆ ರೈತರೂ ಜೇಷ್ಠತೆ ಇಲ್ಲದೆ ಬಂದಾಗ ಖರೀದಿ ಮಾಡಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಜೇಷ್ಠತೆ ಇಲ್ಲದೆ ರಾಗಿ ಖರೀದಿ ಮಾಡುವುದಿಲ್ಲ ಎಂದು ಶಾಸಕ ಕೆ.ಷಡಕ್ಷರಿ ಸ್ಪಷ್ಟಪಡಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ. ಸುದರ್ಶನ್, ರಾಗಿ ಖರೀದಿ ಅಧಿಕಾರಿ ರುದ್ರಪ್ಪ, ರೈತರು ಉಪಸ್ಥಿತರಿದ್ದರು.


ರಾಗಿ ಖರೀದಿ ಕೇಂದ್ರ
ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಕೆ.ಷಡಕ್ಷರಿ ಬೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.