ADVERTISEMENT

ಮಾರುಕಟ್ಟೆ ವಿಶ್ಲೇಷಣೆ: ಏರಿಕೆಯತ್ತ ಮುಖ ಮಾಡಿದ ಟೊಮೆಟೊ

ತರಕಾರಿ, ಸೊಪ್ಪು ದುಬಾರಿ; ಕೋಳಿ ಇಳಿಕೆ, ಮೀನು ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:34 IST
Last Updated 6 ಜುಲೈ 2025, 6:34 IST
ಟೊಮೆಟೊ
ಟೊಮೆಟೊ   

ತುಮಕೂರು: ಇಳಿಕೆಯತ್ತ ಸಾಗಿದ್ದ ತರಕಾರಿ ದರ ಈಗ ಏರಿಕೆಯತ್ತ ಮುಖ ಮಾಡಿದೆ. ಟೊಮೆಟೊ ಬೆಲೆಯೂ ಹೆಚ್ಚಳವಾಗಿದ್ದು, ಸೊಪ್ಪು ಬೆಲೆ ಚೇತರಿಸಿಕೊಂಡಿದೆ. ಕೋಳಿ ಮಾಂಸ ಇಳಿಕೆಯತ್ತ ಹೆಜ್ಜೆ ಹಾಕಿದ್ದು, ಮೀನು ಮತ್ತಷ್ಟು ದುಬಾರಿಯಾಗಿದೆ.

ಕಳೆದ ಎರಡು ವಾರದಿಂದ ತರಕಾರಿ ಧಾರಣೆ ಕಡಿಮೆಯಾಗಿತ್ತು. ಈ ವಾರ ಎಲ್ಲ ತರಕಾರಿಗಳು ಏರಿಕೆಯಾಗಿವೆ. ಬೀನ್ಸ್ ಕೆ.ಜಿ ₹50–60 ದಾಟಿದ್ದು, ಉಳಿದ ತರಕಾರಿಗಳು ಇದೇ ದಾರಿಯಲ್ಲಿ ಸಾಗಿವೆ. ಹೂ ಕೋಸು ಒಂದು ₹40ಕ್ಕೆ ಹೆಚ್ಚಳವಾಗಿದೆ.

ಹಲವು ತಿಂಗಳುಗಳಿಂದ ಕೆ.ಜಿ ₹10–20ರ ನಡುವೆ ಇದ್ದ ಟೊಮೆಟೊ ಒಮ್ಮೆಲೆ ಕೆ.ಜಿ ₹25–30ಕ್ಕೆ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗಬಹುದು ಎಂದು ಹೇಳಲಾಗುತ್ತಿದೆ. ಮಳೆ ಕೊರತೆಯಿಂದಾಗಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಬೆಳೆ ಇಲ್ಲವಾಗಿದೆ. ಇತರೆಡೆಗಳಲ್ಲಿ ಅತಿಯಾದ ಮಳೆಯಿಂದ ಬೆಳೆ ಹಾಳಾಗಿದೆ. ಹಾಗಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ADVERTISEMENT

ಸೊಪ್ಪು ಏರಿಕೆ: ಪಾತಾಳ ಕಂಡಿದ್ದ ಸೊಪ್ಪಿನ ದರ ಈಗ ಉತ್ತಮ ಬೆಲೆ ಕಂಡುಕೊಂಡಿದೆ. ತರಕಾರಿ ದುಬಾರಿಯಾಗಿದ್ದು, ಜನರು ಹೆಚ್ಚಾಗಿ ಸೊಪ್ಪು ಬಳಕೆ ಮಾಡುತ್ತಿರುವುದು, ಆವಕ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಹೆಚ್ಚಳವಾಗಿದೆ.

ಹಣ್ಣು: ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಪಪ್ಪಾಯ, ಕರಬೂಜ ತುಸು ಏರಿಕೆಯಾಗಿದ್ದು, ಡ್ರಾಗನ್ ಫ್ರೂಟ್ ಕೆ.ಜಿಗೆ ₹50 ಇಳಿಕೆಯಾಗಿದೆ. ಉಳಿದ ಹಣ್ಣುಗಳ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಅಡುಗೆ ಎಣ್ಣೆ: ಎಣ್ಣೆ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹145–148, ಪಾಮಾಯಿಲ್ ಕೆ.ಜಿ ₹114–115, ಕಡಲೆಕಾಯಿ ಎಣ್ಣೆ ಕೆ.ಜಿ ₹165–170ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಬೇಳೆ ಧಾನ್ಯ: ಬೇಳೆ ಕಾಳು, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಸಕ್ಕರೆ, ಬೆಲ್ಲ ತುಸು ಇಳಿಕೆಯತ್ತ ಮುಖ ಮಾಡಿದೆ.

ದುಬಾರಿ: ಒಣ ಹಣ್ಣುಗಳ ಬೆಲೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಆಮದು ಪ್ರಮಾಣ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗುವಂತೆ ಮಾಡಿದೆ.

ಧನ್ಯ ಕೆ.ಜಿ ₹110–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹170–190, ಹುಣಸೆಹಣ್ಣು ₹170–180, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹750–780, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹820–850, ಗುಣಮಟ್ಟದ ಗಸಗಸೆ ಕೆ.ಜಿ ₹1,700–1,800, ಏಲಕ್ಕಿ ಕೆ.ಜಿ ₹3,200–3,300, ಬಾದಾಮಿ ಕೆ.ಜಿ ₹780–800, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹400–420ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ: ಕೋಳಿ ಮಾಂಸದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆಕೋಳಿ (ಫಾರಂ) ಕೆ.ಜಿ ₹125ಕ್ಕೆ ಸಿಗುತ್ತಿದೆ.

ಮೀನು ದುಬಾರಿ: ಅಂಜಲ್ ಮೀನು ದರ ದುಬಾರಿಯಾಗಿದ್ದರೆ, ಉಳಿದವು ಅಲ್ಪ ಕಡಿಮೆಯಾಗಿವೆ. ಬಂಗುಡೆ ಕೆ.ಜಿ ₹490, ಬೂತಾಯಿ ₹410, ಬೊಳಿಂಜರ್ ₹210, ಅಂಜಲ್ ಕೆ.ಜಿ ₹1,380, ಬಿಳಿಮಾಂಜಿ ಕೆ.ಜಿ 1,440, ಕಪ್ಪುಮಾಂಜಿ ₹780, ಇಂಡಿಯನ್ ಸಾಲ್ಮನ್ ₹1,000, ಸೀಗಡಿ ಕೆ.ಜಿ ₹510–740, ಏಡಿ ಕೆ.ಜಿ ₹540ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.