ADVERTISEMENT

ತುಮಕೂರಿನಲ್ಲಿ ನಿಲ್ಲದ ಮರ ಕಡಿತ: 6 ಮರಗಳಿಗೆ ಕೊಡಲಿ ಏಟು

6 ಮರಗಳಿಗೆ ಕೊಡಲಿ ಏಟು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 15:32 IST
Last Updated 2 ಮಾರ್ಚ್ 2023, 15:32 IST
ತುಮಕೂರಿನ ಕುವೆಂಪುನಗರ ಕಾಲೇಜು ಲಿಂಕ್ ರಸ್ತೆಯಲ್ಲಿ ಮರ ಕಡಿದಿರುವುದು
ತುಮಕೂರಿನ ಕುವೆಂಪುನಗರ ಕಾಲೇಜು ಲಿಂಕ್ ರಸ್ತೆಯಲ್ಲಿ ಮರ ಕಡಿದಿರುವುದು   

ತುಮಕೂರು: ನಗರದಲ್ಲಿ ಒಂದು ಕಡೆ ಮರಗಳನ್ನು ಕಡಿದ ಗದ್ದಲ ಕಡಿಮೆಯಾಗುತ್ತಿದ್ದಂತೆ, ಮತ್ತೊಂದು ಕಡೆ ಕಡಿಯುವುದು ಮುಂದುವರಿದಿದೆ. ಅಭಿವೃದ್ಧಿ ಹೆಸರಿನಲ್ಲಿ ನಗರ ಕಾಂಕ್ರೀಟ್ ಕಾಡಾಗಿ ಪರಿವರ್ತನೆ ಆಗಿದ್ದರೂ, ಅಳಿದುಳಿದ ಮರಗಳನ್ನು ಅಕ್ರಮವಾಗಿ ಕಡಿಯುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ನಗರದ ವಾರ್ಡ್ ಸಂಖ್ಯೆ 21ರ ಕುವೆಂಪುನಗರ ಕಾಲೇಜು ಲಿಂಕ್ ರಸ್ತೆಯ 2ನೇ ಬ್ಲಾಕ್‌ನ 1ನೇ ಅಡ್ಡ ರಸ್ತೆಯಲ್ಲಿ 35ರಿಂದ 40 ವರ್ಷದ 6 ಮರಗಳನ್ನು ಕಡಿಯಲಾಗಿದೆ. ಕೆಲವು ದಿನಗಳ ಹಿಂದೆ ಜನನಿಬಿಡ ಬಿ.ಎಚ್. ರಸ್ತೆಯಲ್ಲೇ ಮರಗಳನ್ನು ಕಡಿಯಲಾಗಿತ್ತು. ಅದಕ್ಕೂ ಮುನ್ನ ಜಯನಗರ ಸೇರಿದಂತೆ ವಿವಿಧೆಡೆ ಕಡಿಯಲಾಗಿತ್ತು. ಇದಕ್ಕೆ ಪರಿಸರ ಪ್ರೇಮಿಗಳು, ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದರೂ ಮರ ಕಡಿಯುವುದು ಮಾತ್ರ ನಿಂತಿಲ್ಲ.

ಕುವೆಂಪು ನಗರ ಕಾಲೇಜು ಲಿಂಕ್ ರಸ್ತೆಯಲ್ಲಿ ಮರ ಕಡಿಯುವುದು ಗಮನಕ್ಕೆ ಬಂದ ನಂತರ ತಡೆದು ನಿಲ್ಲಿಸಲಾಯಿತು. ನಾವು ಅಲ್ಲಿಂದ ತೆರಳಿದ ನಂತರ ಮತ್ತೆ ಮರಗಳನ್ನು ಕತ್ತರಿಸಲಾಗಿದೆ. ಜನರಿಗೆ ತೊಂದರೆ ನೀಡದ 6 ಮರಗಳನ್ನು ಕಡಿಯಲು ಅನುಮತಿ ಕೊಟ್ಟವರು ಯಾರು ಎಂದು ವೃಕ್ಷ ಮಿತ್ರ ಸಂಘಟನೆಯ ಅಧ್ಯಕ್ಷ ಪ್ರೊ.ಕೆ. ಸಿದ್ದಪ್ಪ ಪ್ರಶ್ನಿಸಿದ್ದಾರೆ.

ADVERTISEMENT

ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ವಲಯ ಅರಣ್ಯಾಧಿಕಾರಿಗಳಾದ ಪವಿತ್ರ ರಾಘವೇಂದ್ರ, ಸಹಾಯಕ ಅರಣ್ಯಾಧಿಕಾರಿ ಪ್ರಕಾಶ್, ಗೋವಿಂದರಾಜು ಅವರಿಗೆ ದೂರವಾಣಿ ಮೂಲಕ ಗಮನಕ್ಕೆ ತಂದು, ಮರ ಕಡಿಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡರೂ ಸ್ಪಂದಿಸಲಿಲ್ಲ. ಜಿಲ್ಲಾಧಿಕಾರಿಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

‘ಮರ ಕಡಿಯುವ ಗುತ್ತಿಗೆದಾರರನ್ನು ಕೇಳಿದರೆ, ಗುತ್ತಿಗೆ ಕೊಟ್ಟಿದ್ದಾರೆ ಕಡಿಯುತ್ತೇನೆ. ಇದನ್ನು ತಡೆಯುವ ತಾಕತ್ತು ನಿಮಗಿದೆಯೇ ಎಂದು ನನ್ನನ್ನೇ ಪ್ರಶ್ನಿಸುತ್ತಾರೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು, ಯಾರು ಏನು ಬೇಕಾದರೂ ಮಾಡಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸಿದ್ದಾರೆ. ನಗರದಲ್ಲಿ ಹಸಿರು ಉಳಿಸಲು ಸಂಘ ಸಂಸ್ಥೆಗಳು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.