
ತುಮಕೂರು: ಬೆಳಗಿನ ಜಾವದ ಚಳಿಗೆ ಹೆದರಿ ಕ್ರೂಸರ್ ವಾಹನದಲ್ಲಿ ಮುದುಡಿ ಕುಳಿತವರು ಚಿರ ನಿದ್ರೆಗೆ ಜಾರಿದ್ದಾರೆ. ಲಾರಿ ಮತ್ತು ಕ್ರೂಸರ್ ವಾಹನ ಚಾಲಕರ ನಿರ್ಲಕ್ಷ್ಯ, ಎಡವಟ್ಟು ನಾಲ್ವರ ಜೀವ ಬಲಿ ಪಡೆದಿದೆ. ರಸ್ತೆ ಸುರಕ್ಷತಾ ನಿಯಮ ಪಾಲಿಸದಿದ್ದರೆ ಪ್ರಾಣಗಳು ಹೋಗುತ್ತವೆ ಎಂಬುವುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ.
ತಾಲ್ಲೂಕಿನ ಕೋರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ನಾಲ್ಕು ಮಂದಿ ಶುಕ್ರವಾರ ಮೃತಪಟ್ಟಿದ್ದಾರೆ. ಇದರಲ್ಲಿ 7 ವರ್ಷದ ಬಾಲಕಿಯೂ ಸೇರಿದ್ದಾರೆ.
ಸಾಕ್ಷಿ (7), ಮಾರುತಪ್ಪ, (45), ವೆಂಕಟೇಶ (30), ಗವಿಸಿದ್ದಪ್ಪ (28) ಮೃತರು. ಸಾಕ್ಷಿ ತಂದೆ ಹುಲಿಗಪ್ಪ (32), ಶ್ರೀನಿವಾಸ್, (32), ಪ್ರದೀಪ್ ಕುಮಾರ್ (28), ರಾಜಪ್ಪ (45), ರಾಕೇಶ್ (24), ತಿರುಪತಿ (33), ಶ್ರೀನಿವಾಸ್ (32) ಎಂಬುವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ಕೊಪ್ಪಳ ಜಿಲ್ಲೆಯ ಕುಕನೂರು, ಗದಿಗೇರಿ ತಾಂಡಾ, ಕಕ್ಕಿಹಳ್ಳಿ ತಾಂಡಾದವರು.
ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಹೋದವರು ವಾಪಸ್ ಮನೆಗೆ ಮರಳಲೇ ಇಲ್ಲ. ಕುಟುಂಬಸ್ಥರ ಕಾಯುವಿಕೆ ಕಣ್ಣೀರಿನಲ್ಲಿ ಕೊನೆಯಾಯಿತು. ಕುಟುಂಬದ ಸದಸ್ಯರು ದೇವರ ದರ್ಶನ ಪಡೆದು ಮನೆಗೆ ಬರುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಯಿತು. ಕುಕನೂರು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪ್ರತಿ ವರ್ಷ ಶಬರಿಮಲೆಗೆ ಹೋಗುತ್ತಾರೆ. ಈ ಬಾರಿಯೂ 5 ಕ್ರೂಸರ್ ವಾಹನಗಳಲ್ಲಿ 50ಕ್ಕೂ ಹೆಚ್ಚು ಜನ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿದ್ದರು.
ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿಕೊಂಡು ಸಂತಸದಿಂದಲೇ ತಮ್ಮ ಊರುಗಳಿಗೆ ಹೋಗುವಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಸ್ಥಳದಲ್ಲಿ ನಜ್ಜುಗುಜ್ಜಾದ ಕ್ರೂಸರ್ ವಾಹನದ ಸ್ಥಿತಿ ನೋಡಿದರೆ ಅಪಘಾತದ ಭೀಕರತೆ ಅರಿವಾಗುತ್ತದೆ. ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಯಿತು.
ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಮೃತರ ಕುಟುಂಬಸ್ಥರು ಶವಾಗಾರದ ಬಳಿ ಸೇರಿದ್ದರು. ತಮ್ಮವರ ಅಗಲಿಕೆಯ ದುಃಖ ಭರಿಸಲಾಗದೆ ಕಣ್ಣೀರು ಹಾಕಿದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಕ್ರೂಸರ್ ವಾಹನದ ಚಾಲಕ ನಿದ್ರೆಯ ಮಂಪರಿನಲ್ಲಿದ್ದರು. ಇದರಿಂದ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನ ಚಾಲಕ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಮೂವರನ್ನು ಬೆಂಗಳೂರಿಗೆ ಕಳುಹಿಸಲಾಗಿದೆಡಾ.ಅಸ್ಗರ್ ಬೇಗ್ ಜಿಲ್ಲಾ ಶಸ್ತ್ರಚಿಕಿತ್ಸಕ
ಮೋಸ ಮಾಡಬ್ಯಾಡ್ರಿ....
‘ಮೋಸ ಮಾಡಬ್ಯಾಡ್ರಿ ದಯವಿಟ್ಟು ಇನ್ನೊಮ್ಮೆ ಚೆಕ್ ಮಾಡ್ರಿ ನನ್ನ ಮಗಳನ್ನ ಉಳಿಸಿ ಸುಳ್ಳು ಹೇಳಬ್ಯಾಡ್ರಿ’ ಎಂದು ಅಪಘಾತದಲ್ಲಿ ಮಗಳನ್ನು ಕಳೆದುಕೊಂಡ ತಂದೆ ಹುಲಿಗಪ್ಪ ಕೇಳಿಕೊಳ್ಳುತ್ತಿದ್ದ ದೃಶ್ಯ ಸ್ಥಳದಲ್ಲಿದ್ದವರ ಕಣ್ಣಲ್ಲಿ ನೀರು ತರಿಸಿತು. ಕ್ರೂಸರ್‌ನಲ್ಲಿ ಮಗಳು ನನ್ನ ಪಕ್ಕದಲ್ಲಿಯೇ ನಿದ್ದೆ ಮಾಡುತ್ತಿದ್ದಳು. ನನಗೂ ನಿದ್ದೆ ಬಂದಂತೆ ಆಗಿತ್ತು. ಅಪಘಾತ ಹೇಗಾಯಿತು ಎಂಬುದು ತಿಳಿಯುತ್ತಿಲ್ಲ. ಕಣ್ತೆರೆದು ನೋಡಿದರೆ ಮಗಳಿಗೆ ಪ್ರಜ್ಞೆ ಇರಲಿಲ್ಲ. ಈಗ ಅವಳ ಮುಖ ತೋರಿಸುತ್ತಿಲ್ಲ. ನಿಮಗೆ ಪುಣ್ಯ ಬರುತ್ತದೆ ನಿಜ ಹೇಳಿ ಎನ್ನುತ್ತಲೇ ವೈದ್ಯರ ಮುಂದೆ ಕಣ್ಣೀರು ಹಾಕಿದರು. ‘ಪಳನಿಯಲ್ಲಿ ಮಧ್ಯಾಹ್ನ ಊಟ ಮಾಡಿ ಅಲ್ಲಿಂದ ಬಿಟ್ವಿ ಮತ್ತೆ ರಾತ್ರಿ ಒಂಬತ್ತೂವರೆಗೆ ಊಟ ಮಾಡಿ ಮಾಲ್ಕೊಂಡಿದ್ವಿ ಆಮೇಲೆ ಏನಾಯ್ತು ಗೊತ್ತಿಲ್ಲ. ದವಾಖಾನೆಗೆ ಬಂದಾಗಲೇ ಪ್ರಜ್ಞೆ ಬಂತು’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಕ್ಕಿಹಳ್ಳಿ ತಾಂಡಾದ ರಾಕೇಶ್ ಅಪಘಾತದ ಭೀಕರತೆ ತೆರೆದಿಟ್ಟರು.
ಕೊನೆ ಯಾವಾಗ ?
2025ರ ಜನವರಿ 7ರಂದು ಬೆಳಗಿನ ಜಾವ ಕೋರ ಹತ್ತಿರದ ಓಬಳಾಪುರ ಗೇಟ್ ಬಳಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿಯಾಗಿ ತಾಯಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಇದೇ ರೀತಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿಯಾಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾತ್ರ ಆಗುತ್ತಿಲ್ಲ. ‘ಕೆಲವು ಸಲ ಎರಡು–ಮೂರು ದಿನ ಭಾರಿ ವಾಹನಗಳು ಹೆದ್ದಾರಿಗಳಲ್ಲಿಯೇ ನಿಂತಿರುತ್ತವೆ. ಕೆಟ್ಟು ನಿಂತ ವಾಹನಗಳಿಗೆ ಯಾವುದೇ ರೀತಿಯ ಬ್ಲಿಂಕರ್ಸ್ ಅಳವಡಿಸಿರುವುದಿಲ್ಲ. ನಿಂತ ವಾಹನ ಗಮನಿಸದೆ ಮುಂದೆ ಸಾಗಿದರೆ ಅಪಘಾತ ಗ್ಯಾರಂಟಿ. ಇದನ್ನು ತಡೆದು ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೆದ್ದಾರಿ ಗಸ್ತು ನಾಮಕಾವಸ್ತೆ ಎಂಬಂತಾಗಿದೆ’ ಎಂದು ಕೋರದ ರಾಮಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.