
ತುಮಕೂರು: ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಸಹಕಾರದಲ್ಲಿ ರೂಪಿಸಿರುವ ‘ಪಿಕ್ ಮೈ ಗಾರ್ಬೆಜ್’ ಯೋಜನೆ ಪ್ರಾರಂಭದಲ್ಲೇ ಮುಗ್ಗರಿಸಿದ್ದು, ಕಳೆದ ಐದು ತಿಂಗಳಲ್ಲಿ ಕೇವಲ 340 ಕೆ.ಜಿ ಕಸ ಸಂಗ್ರಹವಾಗಿದೆ.
ಹಸಿರು ದಳ ಸಂಸ್ಥೆಯೂ ಇದಕ್ಕೆ ಕೈಜೋಡಿಸಿದೆ. ‘ನಿಮ್ಮ ಸಮಯಕ್ಕೆ ನಮ್ಮ ವಾಹನ’ ಪರಿಕಲ್ಪನೆಯಡಿ ಯೋಜನೆ ಜಾರಿಗೊಳಿಸಲಾಗಿದೆ. ಮನೆಯಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಊಟ, ತಿಂಡಿ ತರಿಸಿಕೊಳ್ಳುವಂತೆ, ನಮಗೆ ಬೇಕಾದ ಬಟ್ಟೆ ಖರೀದಿಸುವಂತೆ ಆ್ಯಪ್ ಸಹಾಯದಿಂದ ಕಸ ವಿಲೇವಾರಿ ಮಾಡುವ ಯೋಜನೆ ರೂಪಿಸಲಾಗಿತ್ತು.
ಈವರೆಗೆ ‘ಪಿಕ್ ಮೈ ಗಾರ್ಬೆಜ್’ ಯೋಜನೆಯ ಆ್ಯಪ್ ಬಳಕೆಗೆ ನೀಡಿಲ್ಲ. ಕ್ಯೂಆರ್ ಕೋಡ್ ಸ್ಕ್ಯಾನ್ ಅಥವಾ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವೆಬ್‌ಸೈಟ್‌ನ ಗೂಗಲ್ ಶೀಟ್‌ನಲ್ಲಿ ಅಗತ್ಯ ಮಾಹಿತಿ ಸಲ್ಲಿಸಿದರೆ ಮನೆಯ ಹತ್ತಿರ ಬಂದು ಕಸ ಸಂಗ್ರಹ ಮಾಡುತ್ತಾರೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಮಾದರಿಯಲ್ಲಿ ಕಸ ಸಂಗ್ರಹಿಸುವ ಕಾರ್ಯಕ್ಕೆ ಆಗಸ್ಟ್ 4ರಂದು ಚಾಲನೆ ನೀಡಲಾಯಿತು. ಆರಂಭದಲ್ಲಿ ಜನ ಹೆಚ್ಚಾಗಿ ಆಸಕ್ತಿ ತೋರಲಿಲ್ಲ. ಒಂದು ತಿಂಗಳಲ್ಲಿ ಕೇವಲ 5 ಜನ ಮಾತ್ರ ಇದರ ಪ್ರಯೋಜನ ಪಡೆದರು. ಕಳೆದ ತಿಂಗಳಿನಿಂದ ಸ್ವಲ್ಪ ಸುಧಾರಿಸುತ್ತಿದೆ. ಈವರೆಗೆ 68 ಆರ್ಡರ್‌ಗಳು ಬಂದಿದ್ದು, 340 ಕೆ.ಜಿ ಕಸ ಸಂಗ್ರಹವಾಗಿದೆ.
ಯೋಜನೆ ಆರಂಭದಲ್ಲಿ 1, 2 ಮತ್ತು 3ನೇ ವಾರ್ಡ್‌ಗಳನ್ನು ಮಾತ್ರ ಪರಿಗಣಿಸಲಾಗಿತ್ತು. ನಿರೀಕ್ಷೆಗೆ ತಕ್ಕಂತೆ ಜನರಿಂದ ಸ್ಪಂದನೆ ವ್ಯಕ್ತವಾಗಲಿಲ್ಲ. ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಗಣೇಶ ಚತುರ್ಥಿ ಸಮಯದಲ್ಲಿ ಗಣೇಶ ಪೆಂಡಾಲ್ ಹಾಕಿದ ಕಡೆ ಈ ಕುರಿತು ಅರಿವು ಮೂಡಿಸಿದರು. ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರ ಅಂಟಿಸಿದರು. ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ಹಂಚಿಕೊಂಡರು. ಇದರ ಪರಿಣಾಮ ಈಗ ಇದರ ಬಳಕೆಗೆ ಜನರು ಆಸಕ್ತಿ ತೋರುತ್ತಿದ್ದಾರೆ.
ಪ್ರದೇಶ: ಒಂದು ತಿಂಗಳ ನಂತರ ವ್ಯಾಪ್ತಿ ವಿಸ್ತರಿಸಲಾಯಿತು. ಶಿರಾಗೇಟ್, ಬನಶಂಕರಿ, ಮಾರುತಿ ನಗರ, ಎಂ.ಜಿ.ರಸ್ತೆ, ಜಯನಗರ, ವಿದ್ಯಾನಗರ, ಕುವೆಂಪು ನಗರ, ಸಿಎಸ್‌ಐ ಲೇಔಟ್, ಎಸ್‌ಎಸ್‌ಐಟಿ, ಸದಾಶಿವ ನಗರ, ಸಪ್ತಗಿರಿ ಬಡಾವಣೆ, ಅಶೋಕ ನಗರ, ಗಾಂಧಿ ನಗರ ಸೇರಿ ಸುತ್ತಮುತ್ತಲಿನ ಪ್ರದೇಶಗಳನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಜನರಿಂದ ಉಚಿತವಾಗಿ ಕಸ ಸಂಗ್ರಹಿಸಲಾಗುತ್ತದೆ.
ಸಾರ್ವಜನಿಕರು ಒಣ ಕಸ, ಹಸಿ ಕಸವನ್ನು ಬೇರ್ಪಡಿಸಬೇಕು. ಗರಿಷ್ಠ 5 ಕೆ.ಜಿ ತನಕ ಕಸ ತೆಗೆದುಕೊಂಡು ಹೋಗಲು ಅವಕಾಶ ಇದೆ. ಒಂದು ದಿನ ಮುಂಚಿತವಾಗಿ ಬುಕ್ ಮಾಡಿದರೆ ಸಂಬಂಧಪಟ್ಟವರು ನಿಗದಿತ ಸಮಯಕ್ಕೆ ಬಂದು ಕಸ ಸಂಗ್ರಹಿಸುತ್ತಾರೆ.
ಒಬ್ಬರ ಕೆಲಸ ಸದ್ಯಕ್ಕೆ
ಕಸ ಸಂಗ್ರಹಿಸಲು ಒಬ್ಬರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಗೌರಮ್ಮ ಎಂಬುವರು ಮನೆಗೆ ಭೇಟಿ ನೀಡಿ ಕಸ ತೆಗೆದುಕೊಂಡು ಹೋಗುತ್ತಾರೆ. ಇದಕ್ಕಾಗಿ ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ನಗರದಲ್ಲಿ ಉತ್ತಮ ಸ್ಪಂದನೆ ದೊರೆತರೆ ಮತ್ತಷ್ಟು ಜನರನ್ನು ನೇಮಿಸಲು ಪಾಲಿಕೆ ಸಜ್ಜಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಎಲ್ಲೆಂದರಲ್ಲಿ ಕಸ: ಬೀಳುತ್ತಿಲ್ಲ ಕಡಿವಾಣ ನಗರದಲ್ಲಿ ಕಸ ಸಂಗ್ರಹಿಸಲು ನೂರಾರು ಆಟೊಗಳು ಸಂಚರಿಸುತ್ತಿವೆ. ಪ್ರತಿ ದಿನ ಬೆಂಗಳೂರು ಸೇರಿ ನಾನಾ ಕಡೆ ಕೆಲಸಕ್ಕೆ ಹೋಗುವವರು ಆಟೊಗಳಿಗೆ ಕಸ ನೀಡಲು ಆಗುತ್ತಿಲ್ಲ. ಅವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿತ್ತು. ಬಿಡುವಿನ ಸಮಯದಲ್ಲಿ ಕಸ ವಿಲೇವಾರಿಗೆ ಅನುವು ಮಾಡಿಕೊಡಲಾಗಿದೆ. ಆದರೆ ಇವರು ಇತ್ತ ಆಟೊಗೂ ಕಸ ಹಾಕುತ್ತಿಲ್ಲ ದ್ವಿಚಕ್ರ ವಾಹನಕ್ಕೂ ಕೊಡುತ್ತಿಲ್ಲ. ರಸ್ತೆ ಬದಿ ಖಾಲಿ ಜಾಗದಲ್ಲಿ ಕಸದ ರಾಶಿ ಹಾಕುತ್ತಿದ್ದಾರೆ. ಕಸ ಹಾಕುವುದನ್ನು ತಡೆಯಲು ಪಾಲಿಕೆಯಿಂದ ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಆರೋಗ್ಯ ನಿರೀಕ್ಷಕರು ಮತ್ತು ಸೂಪರ್ ವೈಸರ್‌ಗಳು ತಂಡದಲ್ಲಿದ್ದಾರೆ. ಈ ತಂಡ ಎಲ್ಲಿ ಕೆಲಸ ಮಾಡುತ್ತಿದೆ ಎಂಬುವುದು ಯಾರಿಗೂ ಗೊತ್ತಿಲ್ಲ. ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.