ತುಮಕೂರು: ರಾಜ್ಯ ರಾಜಧಾನಿಯ ಹೆಬ್ಬಾಗಿಲಿನಂತಿರುವ ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಪ್ರತಿ ವರ್ಷ ಏರಿಕೆಯಾಗುತ್ತಿವೆ. ಈ ವರ್ಷದ 7 ತಿಂಗಳಲ್ಲಿ 461 ಜನ ಪ್ರಾಣ ಕಳೆದುಕೊಂಡಿದ್ದಾರೆ. 2023ರ ಜನವರಿಯಿಂದ 2025ರ ಆಗಸ್ಟ್ ಮೊದಲ ವಾರದ ಅಂತ್ಯಕ್ಕೆ 2,030 ಮಂದಿ ಅಪಘಾತದಲ್ಲಿ ಜೀವ ಬಿಟ್ಟಿದ್ದಾರೆ.
ಈ ವರ್ಷದ ಆರಂಭದಿಂದ ಆ. 8ರ ವರೆಗೆ ಸಂಭವಿಸಿದ ಅಪಘಾತಗಳಲ್ಲಿ 431 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 1,949 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಪ್ರಮುಖ ಹೆದ್ದಾರಿಗಳಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಅಪಘಾತ ಹೆಚ್ಚಳಕ್ಕೆ ಇದು ಪ್ರಮುಖ ಕಾರಣವಾಗಿದೆ.
ಬೆಂಗಳೂರು– ಪುಣೆ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು– ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ತುಮಕೂರು– ಮಧುಗಿರಿ ರಾಜ್ಯ ಹೆದ್ದಾರಿ, ಕುಣಿಗಲ್ ಬಳಿ ರಾಜ್ಯ ಹೆದ್ದಾರಿ 33ರಲ್ಲಿ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ. ತುಂಬಾ ಜನ ಅಪರಿಚಿತ ವಾಹನಗಳ ಡಿಕ್ಕಿಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ.
‘ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದಲೂ ಅಪಘಾತಗಳು ಹೆಚ್ಚುತ್ತಿವೆ. ಇದೀಗ ಜಿಲ್ಲೆಯಲ್ಲಿ ಹೊಸದಾಗಿ 40 ಅಪಘಾತ ವಲಯ (ಬ್ಲ್ಯಾಕ್ ಸ್ಪಾಟ್) ಗುರುತಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಗುರುತಿಸಿದ ಬ್ಲ್ಯಾಕ್ ಸ್ಪಾಟ್‍ಗಳಲ್ಲಿ ಅಪಘಾತ ತಡೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಹೆದ್ದಾರಿಗಳಲ್ಲಿ ರಸ್ತೆ ಮಾರ್ಗಸೂಚಿ ಅನುಸರಿಸುತ್ತಿಲ್ಲ. ರಸ್ತೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡುತ್ತಿಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿ ತಿರುವು ತೆಗೆದುಕೊಳ್ಳುವಂತೆ ಸೂಚಿಸುವ ಸೂಚನಾ ಫಲಕಗಳು ಕಾಣೆಯಾಗಿವೆ’ ಎಂಬ ಆರೋಪ ಸಾಮಾನ್ಯವಾಗಿದೆ.
ಮುಗಿಯದ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೋರ, ನೆಲಹಾಳ್, ಪಂಡಿತನಹಳ್ಳಿ ಗೇಟ್ ಬಳಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇಲ್ಲಿ ಯಾವುದೇ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಗುಂಡಿಗಳನ್ನು ಗಮನಿಸದೆ ಬಂದ ವಾಹನಗಳು ರಸ್ತೆಗೆ ಉರುಳುತ್ತಿವೆ.
ಒಟ್ಟು ಅಪಘಾತದಲ್ಲಿ ಶೇ 35ರಷ್ಟು ಅಪಘಾತಗಳು ವಾಹನ ಸವಾರರ ನಿರ್ಲಕ್ಷ್ಯದಿಂದಲೇ ಸಂಭವಿಸುತ್ತವೆ. ಹೆದ್ದಾರಿಗಳಲ್ಲಿ ತಕ್ಷಣಕ್ಕೆ ಟ್ರ್ಯಾಕ್ ಬದಲಿಸುವುದರಿಂದ ಹಿಂಬದಿಯಿಂದ ಬರುವ ವಾಹನ ಡಿಕ್ಕಿಯಾಗುವ ಸಂಭವ ಹೆಚ್ಚಿರುತ್ತದೆ. ರಾತ್ರಿ 10 ಗಂಟೆಯ ನಂತರ ಹಾಗೂ ಬೆಳಗಿನ ಜಾವದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ.
ಸವಾರರು ಮತ್ತೊಂದು ವಾಹನ ಹಿಂದಿಕ್ಕುವ ಬರದಲ್ಲಿ ಹಾನಿ ಮಾಡಿಕೊಳ್ಳುತ್ತಿದ್ದಾರೆ. ನಗರ ಪ್ರದೇಶದಲ್ಲಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದರಿಂದ ತಲೆಗೆ ತೀವ್ರ ಪೆಟ್ಟಾಗಿ ಬದುಕಿ ಉಳಿಯುವುದು ಕಷ್ಟವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.