ADVERTISEMENT

ತುಮಕೂರು | ಚಿನ್ನದಂಗಡಿ ದರೋಡೆ: ₹26 ಲಕ್ಷ ಮೌಲ್ಯದ ಆಭರಣ ಜಪ್ತಿ, ನಾಲ್ವರು ಬಂಧನ

12 ಗಂಟೆಯಲ್ಲಿ ದರೋಡೆಕೋರರು ಸೆರೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:36 IST
Last Updated 24 ಫೆಬ್ರುವರಿ 2026, 6:36 IST
ದರೋಡೆಕೋರರನ್ನು ಬಂಧಿಸಿದ ಪೊಲೀಸ್‌ ತಂಡ
ದರೋಡೆಕೋರರನ್ನು ಬಂಧಿಸಿದ ಪೊಲೀಸ್‌ ತಂಡ   

ತುಮಕೂರು: ಶಿರಾ ತಾಲ್ಲೂಕಿನ ಬೆಂಚೆ ಗೇಟ್‌ ಬಳಿ ಚಿನ್ನದಂಗಡಿ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಪೊಲೀಸರು 12 ಗಂಟೆಯಲ್ಲಿ ಬಂಧಿಸಿ, ₹26 ಲಕ್ಷ ಮೌಲ್ಯದ ಚಿನ್ನ– ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ.

ಭಾನುವಾರ ಇಡೀ ರಾತ್ರಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ರಾಜಸ್ಥಾನದ ಅರವಿಂದ್‌ ಕುಮಾರ್‌ (28), ಡುಂಗರ್‌ ಸಿಂಗ್‌ (24), ಮಹೇಂದರ್‌ ಸಿಂಗ್‌ (32), ಮಧು ಸಿಂಗ್‌ (28) ಬಂಧಿತರು. ನಾಲ್ವರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು, 10 ದಿನ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಇಲ್ಲಿ ಸೋಮವಾರ ಹೇಳಿದರು.

ADVERTISEMENT

‘ಭಾನುವಾರ ಮಧ್ಯಾಹ್ನ 3.30ರ ಸಮಯದಲ್ಲಿ ನಾಲ್ವರು ಜಗತಾಂಭ ಚಿನ್ನದ ಮಳಿಗೆಗೆ ನುಗ್ಗಿದ್ದರು. ಮಾಲೀಕರಾದ ದಿನೇಶ್‌ ಮತ್ತು ನಾತಿದೇವಿ ಕಣ್ಣಿಗೆ ಖಾರದಪುಡಿ ಎರಚಿದ್ದರು. ಷಟರ್‌ ಕೆಳಗಡೆ ಎಳೆದ ಆಭರಣ ಕದ್ದು, ಬೊಲೆರೊ ವಾಹನದಲ್ಲಿ ತೆರಳಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಎಚ್ಚೆತ್ತುಕೊಂಡ ಪೊಲೀಸರು, ದರೋಡೆಕೋರರು ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌ ಮತ್ತು ನಾಕಾಬಂಧಿ ಹಾಕಿದ್ದರು. ಪೊಲೀಸರ ಒಂದು ತಂಡ ಆರೋಪಿಗಳ ವಾಹನ ಬೆನ್ನಟ್ಟಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಾವರೆಕೆರೆ ಬಳಿ ಹಾಕಿದ್ದ ಬ್ಯಾರಿಕೇಡ್‌ ಕಂಡ ಆರೋಪಿಗಳು ಅಲ್ಲಿಂದ ವಾಪಸ್‌ ತೆರಳಿದ್ದರು. ಪೊಲೀಸರು ಗ್ರಾಮಸ್ಥರ ಸಹಾಯದಿಂದ ಭುವನಹಳ್ಳಿ, ಸೋರೆಕುಂಟೆ, ಮೇಕೆರೆಹಳ್ಳಿ ಸುತ್ತಮುತ್ತಲಿನ ಹಳ್ಳಿಗಳ ರಸ್ತೆ ಬಂದ್‌ ಮಾಡಿದ್ದರು. ಇದರಿಂದ ದಿಕ್ಕು ತೋಚದಂತಾದ ದರೋಡೆಕೋರರು ಮೇಕೆರೆಹಳ್ಳಿ ಬಳಿ ವಾಹನ ನಿಲ್ಲಿಸಿ, ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು ಎಂದರು.

ರಾತ್ರಿ ಕಾರ್ಯಾಚರಣೆ: ಆರೋಪಿಗಳನ್ನು ಹಿಂಬಾಲಿಸಿದ ಪೊಲೀಸರು ಇಡೀ ರಾತ್ರಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದರು. ನಾಲ್ವರು ನಾಲ್ಕು ದಿಕ್ಕಿನಲ್ಲಿ ಹೋಗಿದ್ದರು. ಡ್ರೋನ್‌ ಸಹಾಯದ ಮೂಲಕ ಒಬ್ಬೊಬ್ಬರನ್ನೇ ಪತ್ತೆ ಹಚ್ಚಲಾಯಿತು. ಕೊನೆಯ ಆರೋಪಿ ಸೋಮವಾರ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಕಾರ್ಯಾಚರಣೆಯ ಬಗೆಯನ್ನು ವಿವರಿಸಿದರು.

ದರೋಡೆಕೋರರು ಶುಕ್ರವಾರ ರಾತ್ರಿ ಜಿಲ್ಲೆ ಪ್ರವೇಶಿಸಿದ್ದರು. ಶನಿವಾರ ಇಡೀ ದಿನ ದರೋಡೆಗೆ ಯೋಜನೆ ರೂಪಿಸಿದ್ದರು. ಭಾನುವಾರ ಮಧ್ಯಾಹ್ನ ಅಂಗಡಿಗೆ ನುಗ್ಗಿದ್ದರು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಗೋಪಾಲ್‌, ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ರಾನುಗುಪ್ತ, ಡಿವೈಎಸ್‌ಪಿ ಬಿ.ಕೆ.ಶೇಖರ್‌, ಸಿಪಿಐ ಡಿ.ಜಿ.ಶ್ರೀನಿವಾಸ, ಪಿಎಸ್‌ಐ ಪ್ರವೀಣ್‌ಕುಮಾರ್‌, ರಾಘವೇಂದ್ರ, ಭೈರೇಗೌಡ, ಮಾಳಪ್ಪ, ರೇಣುಕಾ ಯಾದವ್‌, ಎಎಸ್‌ಐ ನರಸಿಂಹಯ್ಯ, ನರಸಿಂಹಮೂರ್ತಿ, ಹುಚ್ಚೀರಣ್ಣ, ಸಿಬ್ಬಂದಿ ಸಿ.ಪಿ.ಕಿರಣ್‌ಕುಮಾರ್‌, ಬಿ.ಕೆ.ಪ್ರಸಾದ್‌, ರೇಣುಕ, ಷಫೀವುಲ್ಲಾ ಇತರರ ತಂಡ ಕಾರ್ಯಾಚರಣೆ ನಡೆಸಿತ್ತು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಪುರುಷೋತ್ತಮ್, ಸಿ.ಗೋಪಾಲ್‌ ಹಾಜರಿದ್ದರು.

ತಾಳಿ ಕಳವಾಗಿದೆ

ಹೆತ್ತೇನಹಳ್ಳಿ ಮಾರಮ್ಮ ದೇವಿಯ ತಾಳಿ ಕಳವಾಗಿದೆ. ಕಳೆದ ವಾರ ನಡೆದ ಕಳ್ಳತನದಲ್ಲಿ ತಾಳಿ ಜತೆಗೆ ಇತರೆ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ. ತಹಶೀಲ್ದಾರ್‌ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದಾಗ ತಾಳಿ ಇರಲಿಲ್ಲ. ಆರೋಪಿಗಳ ಸುಳಿವು ಸಿಕ್ಕಿಲ್ಲ. ತನಿಖೆ ನಡೆಯುತ್ತಿದೆ. ಕೆ.ವಿ.ಅಶೋಕ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.