ADVERTISEMENT

ತುಮಕೂರು | ಸೊಪ್ಪು ದುಬಾರಿ; ಏರಿಕೆಯತ್ತ ತರಕಾರಿ, ಹಣ್ಣು, ಬೇಳೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:17 IST
Last Updated 26 ಅಕ್ಟೋಬರ್ 2025, 7:17 IST
ಪಾಲಕ್ ಸೊಪ್ಪು
ಪಾಲಕ್ ಸೊಪ್ಪು   

ತುಮಕೂರು:‌‌ ಒಂದು ಹಂತದಲ್ಲಿದ್ದ ತರಕಾರಿ ಬೆಲೆ ಮತ್ತೆ ಏರಿಕೆಯತ್ತ ಮುಖ ಮಾಡಿದ್ದು, ಸೊಪ್ಪು ದುಬಾರಿಯಾಗಿದೆ. ಹಣ್ಣಿನ ದರವೂ ಹೆಚ್ಚಳವಾಗಿದ್ದು, ಬೇಳೆ, ಧಾನ್ಯವೂ ತುಸು ತೇಜಿಯಾಗಿದೆ. ಮೀನು, ಕೋಳಿ ಮಾಂಸವೂ ಏರಿಕೆ ದಾಖಲಿಸಿದೆ.

ಈ ವಾರ ಉತ್ತಮ ಮಳೆಯಾಗಿದ್ದು, ಮಾರುಕಟ್ಟೆಗೆ ತರಕಾರಿ ಆವಕ ತಗ್ಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕ್ಯಾರೇಟ್, ಗಡ್ಡೆಕೋಸು, ಬೆಂಡೆಕಾಯಿ, ಬದನೆಕಾಯಿ, ಆಲೂಗಡ್ಡೆ, ಕ್ಯಾಪ್ಸಿಕಂ ಮತ್ತಷ್ಟು ದುಬಾರಿಯಾಗಿದೆ. ಹಾಗಲಕಾಯಿ ಅಲ್ಪ ಇಳಿಕೆಯಾಗಿರುವುದು ಬಿಟ್ಟರೆ ಉಳಿದ ತರಕಾರಿಗಳು ಏರಿಕೆಯತ್ತಲೇ ಮುಖ ಮಾಡಿವೆ.‌

ಸೊಪ್ಪು ದುಬಾರಿ: ಒಮ್ಮೆಲೆ ಸೊಪ್ಪಿನ ದರ ದುಪ್ಪಟ್ಟಾಗಿದ್ದು, ಜನರು ಸೊಪ್ಪು ಖರೀದಿ ಕಡಿಮೆ ಮಾಡುವಂತೆ ಮಾಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹70–80, ಮೆಂತ್ಯ ಸೊಪ್ಪು ಕೆ.ಜಿ ₹70–80, ಪಾಲಕ್ ಸೊಪ್ಪು (ಕಟ್ಟು) ₹60ಕ್ಕೆ ಹೆಚ್ಚಳವಾಗಿದೆ.

ADVERTISEMENT

ಹಣ್ಣು ಏರಿಕೆ: ಈ ವಾರ ಯಾವ ಹಣ್ಣಿನ ಧಾರಣೆಯೂ ಕಡಿಮೆಯಾಗಿಲ್ಲ. ಮೂಸಂಬಿ, ಕಿತ್ತಳೆ, ಪೈನಾಪಲ್ ಏರಿಕೆ ದಾಖಲಿಸಿದ್ದರೆ, ಪಪ್ಪಾಯ ತುಸು ಇಳಿದಿದೆ. ಉಳಿದ ಹಣ್ಣುಗಳು ಯಥಾಸ್ಥಿತಿ ಕಾಯ್ದುಕೊಂಡಿವೆ.

ಅಡುಗೆ ಎಣ್ಣೆ: ಏರಿಕೆಯತ್ತ ಮುಖ ಮಾಡಿದ್ದ ಅಡುಗೆ ಎಣ್ಣೆ ದರ ಈಗ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹148–150, ಪಾಮಾಯಿಲ್ ಕೆ.ಜಿ ₹121–123, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಬೇಳೆ ಧಾನ್ಯ ಹೆಚ್ಚಳ: ಬೇಳೆ, ಧಾನ್ಯಗಳ ಧಾರಣೆಯಲ್ಲಿ ಕೊಂಚ ತೇಜಿ ಕಂಡು ಬಂದಿದೆ. ಉದ್ದಿನ ಬೇಳೆ, ಹೆಸರು ಕಾಳು, ಶೇಂಗಾ ಅಲ್ಪ ಏರಿಕೆಯಾಗಿದ್ದು, ತೊಗರಿ ಬೇಳೆ, ಅಲಸಂದೆ, ಅವರೆಕಾಳು, ಬೆಲ್ಲ ಕೊಂಚ ಕಡಿಮೆಯಾಗಿದೆ.

ಮಸಾಲೆ ಪದಾರ್ಥ: ಮೆಣಸಿನಕಾಯಿ, ಜೀರಿಗೆ, ಲವಂಗ, ಏಲಕ್ಕಿ ಅಲ್ಪ ಇಳಿಕೆಯಾಗಿದ್ದರೆ, ಚಕ್ಕೆ, ಗೋಡಂಬಿ ಏರಿಕೆಯಾಗಿದೆ.

ಧನ್ಯ ಕೆ.ಜಿ ₹110–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹175–185, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹740–750, ಜೀರಿಗೆ ಕೆ.ಜಿ ₹225–240, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹780–820, ಗುಣಮಟ್ಟದ ಗಸಗಸೆ ಕೆ.ಜಿ ₹1,450–1,600, ಏಲಕ್ಕಿ ಕೆ.ಜಿ ₹3,000–3,200, ಬಾದಾಮಿ ಕೆ.ಜಿ ₹760–780, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹420–440ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮತ್ತೆ ಏರಿಕೆ: ಕೋಳಿ ಮಾಂಸ ಮತ್ತಷ್ಟು ದುಬಾರಿಯಾಗಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹235, ಸ್ಕಿನ್‌ಲೆಸ್ ಕೆ.ಜಿ ₹260ಕ್ಕೆ ಹೆಚ್ಚಳವಾಗಿದೆ. ಮೊಟ್ಟೆ ₹6ಕ್ಕೆ ಸಿಗುತ್ತಿದೆ.

ಮೀನು ದುಬಾರಿ: ಮೀನಿನ ಧಾರಣೆ ಒಮ್ಮೆಲೆ ಏರಿಕೆ ದಾಖಲಿಸಿದೆ. ಬಂಗುಡೆ ಕೆ.ಜಿ ₹290, ಬೂತಾಯಿ ₹350, ಬೊಳಿಂಜರ್ ₹260, ಅಂಜಲ್ (ಸಣ್ಣ) ಕೆ.ಜಿ ₹820, ದಪ್ಪ ಕೆ.ಜಿ ₹1,030, ಬಿಳಿಮಾಂಜಿ ಕೆ.ಜಿ 1,250, ಕಪ್ಪುಮಾಂಜಿ ₹780, ಇಂಡಿಯನ್ ಸಾಲ್ಮನ್ ₹940, ಸೀಗಡಿ ಕೆ.ಜಿ ₹500–810, ಏಡಿ ಕೆ.ಜಿ ₹610ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.