ADVERTISEMENT

ಪಾಲಿಕೆ ಸ್ಥಾಯಿ ಸಮಿತಿ ‘ಅಧ್ಯಕ್ಷಗಿರಿ’ಯತ್ತ ಕಿರಿಯರ ಚಿತ್ತ

ಎರಡು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಮೈತ್ರಿಗೆ; ಉಳಿದೆರಡು ಸ್ಥಾನ ಬಿಜೆಪಿಗೆ ದೊರೆಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:23 IST
Last Updated 14 ಫೆಬ್ರುವರಿ 2020, 9:23 IST
ಟಿ.ಕೆ.ನರಸಿಂಹಮೂರ್ತಿ
ಟಿ.ಕೆ.ನರಸಿಂಹಮೂರ್ತಿ   

ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಮತ್ತು ಜೆಡಿಎಸ್, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಹಂಚಿಕೆಯಲ್ಲಿಯೂ ‘ಮೈತ್ರಿ’ಗೆ ಮುಂದಾಗಿವೆ. ಈ ಪಕ್ಷಗಳ ಕಿರಿಯ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಮಾತು ಪಾಲಿಕೆ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ತೆರಿಗೆ ಸುಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ‘ಅಧ್ಯಕ್ಷಗಿರಿ’ ಕಾಂಗ್ರೆಸ್‌ಗೆ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ದಕ್ಕುವ ಸಾಧ್ಯತೆ ಇದೆ. ಉಳಿದ ಸಮಿತಿಗಳಾದ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ,ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ದಕ್ಕುತ್ತವೆ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.

ಈ ಹಿಂದಿನ ವರ್ಷದಲ್ಲಿ ಮೇಯರ್‌ ಅವರು ಪ್ರತಿನಿಧಿಸುವ ಪಕ್ಷದವರೇ ತೆರಿಗೆ ಸಮಿತಿಯ ಚುಕ್ಕಾಣಿ ಹಿಡಿದಿದ್ದರು. ಈ ಬಾರಿಯೂ ಹಾಗೆಯೇ ಆಗುತ್ತದೆ. 5ನೇ ವಾರ್ಡ್‌ನ ಟಿ.ಎಂ.ಮಹೇಶ್‌ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಕೂರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಮಾತಿಗೆ ಜೆಡಿಎಸ್‌ನವರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಜೆಡಿಎಸ್‌ನ 23ನೇ ವಾರ್ಡ್‌ ಸದಸ್ಯ ಟಿ.ಕೆ.ನರಸಿಂಹಮೂರ್ತಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಮೇಯರ್‌ ಚುನಾವಣಾ ಪೂರ್ವದಲ್ಲಿಯೇ ಸ್ಥಾಯಿ ಸಮಿತಿಗಳ ಅಧಿಕಾರ ಹಂಚಿಕೆ ‘ಮೈತ್ರಿ’ ಪಕ್ಷಗಳಲ್ಲಿ ಹಂಚಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಚುಕ್ಕಾಣಿ ಹಿಡಿದಿರುವ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ನಿರ್ಧರಿಸಲಿದ್ದಾರೆ.

ಅಧ್ಯಕ್ಷ ಸ್ಥಾನ ಬೇಕೆಂದು ನಮ್ಮಲ್ಲಿ ಯಾರೂ ಪಟ್ಟು ಹಿಡಿದಿಲ್ಲ. ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ಬಿಜೆಪಿ ಸದಸ್ಯರೊಬ್ಬರು ತಿಳಿಸಿದರು.

*

ಸ್ಥಾಯಿ ಸಮಿತಿ ಸದಸ್ಯರು
ತೆರಿಗೆ ಸುಧಾರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಧರಣೇಂದ್ರ ಕುಮಾರ್, ಟಿ.ಎಂ.ಮಹೇಶ್, ಷಕೀಲ್ ಅಹಮದ್ ಷರೀಫ್, ನಳಿನ ಇಂದ್ರಕುಮಾರ್, ಮುಜಿದಾ ಖಾನಂ, ನೂರು ಉನ್ನೀಸಾ ಬಾನು, ಬಿ.ಎಸ್.ಮಂಜುನಾಥ.

ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಎಚ್.ಎಂ.ದೀಪಶ್ರೀ, ಟಿ.ಕೆ.ನರಸಿಂಹಮೂರ್ತಿ, ಸೈಯದ್ ನಯಾಜ್, ಬಿ.ಜಿ.ಕೃಷ್ಣಪ್ಪ, ಎ.ಶ್ರೀನಿವಾಸ, ಎಂ.ಪ್ರಭಾವತಿ, ಲಲಿತಾ ರವೀಶ್.

ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ: ಎಚ್.ಮಲ್ಲಿಕಾರ್ಜುನಯ್ಯ, ವಿ.ಎಸ್.ಗಿರಿಜ, ಎಚ್.ಎಸ್.ನಿರ್ಮಲ ಶಿವಕುಮಾರ್, ಎಂ.ಸಿ.ನವೀನ ಅರುಣ, ನಾಸಿರಾ ಬಾನು, ಬಿ.ಎಸ್.ರೂಪಶ್ರೀ, ಬಿ.ಜಿ.ವೀಣಾ.

ಲೆಕ್ಕಪತ್ರ ಸ್ಥಾಯಿ ಸಮಿತಿ: ಕೆ.ಎಸ್.ಮಂಜುಳ, ಎಸ್. ಮಂಜುನಾಥ್, ಸಿ.ಎನ್.ರಮೇಶ್, ಚಂದ್ರಕಲಾ, ಇನಾಯತುಲ್ಲಾ ಖಾನ್, ಜೆ.ಕುಮಾರ್, ವಿಷ್ಣುವರ್ಧನ.

*

ಸಮಿತಿ ಅಧ್ಯಕ್ಷರ ಆಯ್ಕೆಯ ಸಭೆಗೆ ಎಲ್ಲ ಸದಸ್ಯರಿಗೆ ಎರಡ್ಮೂರು ದಿನಗಳಲ್ಲಿ ನೋಟಿಸ್‌ ಕೊಡುತ್ತೇವೆ. ಆಯ್ಕೆ ಪ್ರಕ್ರಿಯೆ ಹತ್ತು ದಿನಗಳಲ್ಲಿ ಮುಗಿಯಲಿದೆ.
-ಫರೀದಾ ಬೇಗಂ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.